ADVERTISEMENT

ಚಳಕಾಪುರವಾಡಿ: ನೀರಿನ ಸಮಸ್ಯೆ ಉಲ್ಬಣ

ಅಶುದ್ಧ ನೀರು ಪೂರೈಕೆ: ಗ್ರಾಮಸ್ಥರಲ್ಲಿ ಮೈ ತುರಿಕೆ ಲಕ್ಷಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:15 IST
Last Updated 20 ಏಪ್ರಿಲ್ 2021, 3:15 IST
ಭಾಲ್ಕಿ ತಾಲ್ಲೂಕಿನ ಚಳಕಾಪುರ ವಾಡಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಸಾಲಿನಲ್ಲಿ ನಿಂತಿರುವುದು
ಭಾಲ್ಕಿ ತಾಲ್ಲೂಕಿನ ಚಳಕಾಪುರ ವಾಡಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಸಾಲಿನಲ್ಲಿ ನಿಂತಿರುವುದು   

ಚಳಕಾಪುರವಾಡಿ (ಖಟಕಚಿಂಚೋಳಿ): ಭಾಲ್ಕಿ ತಾಲ್ಲೂಕಿನ ಚಳಕಾಪುರ ವಾಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕೊಳವೆ ಬಾವಿಯಿಂದ ಅಶುದ್ಧ ನೀರು ಪೂರೈಕೆ ಆಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ತುರಿಕೆ, ನೋವು ಕಾಣಿಸಿಕೊಂಡಿದೆ.

‘ಚಳಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಹಳ್ಳಿಯಲ್ಲಿ ಸುಮಾರು ಒಂದು ಸಾವಿರ ಜನ ವಾಸಿಸುತ್ತಾರೆ. ಗ್ರಾಮದಲ್ಲಿ ಐದು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಈ ಪೈಕಿ ಎರಡರಲ್ಲಿ ನೀರು ಬರುತ್ತಿಲ್ಲ. ಇನ್ನುಳಿದ ಎರಡು ಕೊಳವೆಬಾವಿಗಳಲ್ಲಿ ಕಲುಷಿತ ನೀರು ಬರುತ್ತಿದೆ. ಇದನ್ನು ಸೇವಿಸುವುದರಿಂದ ಗ್ರಾಮದ ಬಹು ತೇಕರು ಅನಾರೋಗ್ಯಕ್ಕೆ ತುತ್ತಾಗುತ್ತಿ ದ್ದಾರೆ’ ಎಂದು ಗ್ರಾಮಸ್ಥರು ದೂರಿದರು.

‘ಒಂದು ಕೊಳವೆಬಾವಿಯಲ್ಲಿ ಮಾತ್ರ ಶುದ್ಧ ಕುಡಿಯುವ ನೀರು ಬರುತ್ತದೆ. ಆದರೆ ಅದು ಗ್ರಾಮದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಜನರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಎರಡು ಕೊಳವೆಬಾವಿಯಲ್ಲಿನ ಕಲುಷಿತ ನೀರು ಸೇವಿಸುವುದರಿಂದ ಗ್ರಾಮಸ್ಥರಲ್ಲಿ ಮೈ ತುರಿಕೆ ಉಂಟಾಗುತ್ತಿದೆ’ ಎಂದು ಗ್ರಾಮದ ಚಂದ್ರಕಾಂತ ಜಾಧವ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಕೊಳವೆಬಾವಿ ಕೆಟ್ಟಿರುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತರಲಾಗಿದೆ. ಅವರು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ನೀರಿನ ಸಮಸ್ಯೆ ಬಿಗಾಡಿಯಿಸಲು ಪಿಡಿಒ ಹಾಗೂ ಪಂಪ್ ಆಪರೆಟರ್ ನಿರ್ಲಕ್ಷ್ಯವೇ ಕಾರಣವಾಗಿದೆ. ಶೀಘ್ರ ಕೊಳವೆಬಾವಿ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡಲಾಗುವುದು’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

‘ಗ್ರಾಮದಲ್ಲಿನ ಕೊಳವೆಬಾವಿಗೆ ಶುದ್ಧ ನೀರು ಬರುತ್ತಿಲ್ಲ. ಊರ ಹೊರಗಿನ ಒಂದು ಕೊಳವೆಬಾವಿಗೆ ಶುದ್ಧ ನೀರು ಬರುತ್ತಿದೆ. ಆದರೆ, ಅಷ್ಟು ದೂರದಿಂದ ಹೊತ್ತು ತರುವ ಶಕ್ತಿ ನಮ್ಮಲ್ಲಿ ಇಲ್ಲ. ಆದ್ದರಿಂದ ಕಲುಷಿತ ನೀರನ್ನೇ ಸೇವಿಸುತ್ತಿದ್ದೇವೆ’ ಎಂದು ಹಿರಿಯರಾದ ಭಾಗಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ಗ್ರಾಮದ ಜನತೆ ಶುದ್ಧ ಕುಡಿಯುವ ನೀರಿಗಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಅಶುದ್ಧ ನೀರಿನ ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ಕ್ಷೇತ್ರದ ಶಾಸಕರು ಗಮನಹರಿಸಿ ಶುದ್ಧ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಜನ್ಮಭೂಮಿ ರಕ್ಷಣಾ ಪಡೆ ಅಧ್ಯಕ್ಷ ಸುಭಾಷ ಕೆನಾಡೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.