ADVERTISEMENT

ಸಡಗರ, ಸಂಭ್ರಮದಿಂದ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಛತ್ರಪತಿ ಶಿವಾಜಿ ಜಾತ್ಯತೀತ, ಧರ್ಮಾತೀತರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 12:51 IST
Last Updated 19 ಫೆಬ್ರುವರಿ 2025, 12:51 IST
   

ಬೀದರ್‌: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರದಲ್ಲಿ ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಶಿವಾಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಜಿಲ್ಲಾಡಳಿತ, ಮರಾಠ ಸಮಾಜದಿಂದ ಮಧ್ಯಾಹ್ನ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಉದ್ಘಾಟಿಸಿದರು.

ADVERTISEMENT

ನಂತರ ಅವರು ಮಾತನಾಡಿ, ಶಿವಾಜಿ ಮಹಾರಾಜರು ಧರ್ಮನಿರಪೇಕ್ಷ, ಧರ್ಮಾತೀತ, ಜಾತ್ಯತೀತ ವ್ಯಕ್ತಿ ಆಗಿದ್ದರು. ಅವರ ಅಂಗರಕ್ಷಕರೇ ಮುಸ್ಲಿಂ ಸಮುದಾಯದವರಾಗಿದ್ದರು. ಅನೇಕ ಹುದ್ದೆಗಳಲ್ಲಿ ಮುಸ್ಲಿಂ ನಾಯಕರನ್ನು ನೇಮಿಸಿದ್ದರು. ಎಲ್ಲ ಸಮುದಾಯದವರನ್ನು ಒಟ್ಟಾಗಿ ಮುನ್ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಕೆಲವು ಜಾತಿ-ಜಾತಿಗಳಲ್ಲಿ ಕೋಮು-ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು, ಎಲ್ಲ ಸಮುದಾಯಗಳು ಒಟ್ಟಾಗಿ ಸಹೋದರತ್ವದಿಂದ ಬಾಳಬೇಕೆಂದು ಹೇಳಿದರು.

ರಾಷ್ಟ್ರ ಪುರುಷ, ರಾಷ್ಟ್ರವೀರ, ಧರ್ಮನಿರಪೇಕ್ಷ, ಜಾತ್ಯತೀತ ಮಹಾವೀರ, ರೈತ ಅಭಿವೃದ್ಧಿ, ಸ್ವದೇಶ ರಾಜ್ಯಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ತತ್ವಗಳನ್ನು ಇಂದಿನ ಯುವ ಜನಾಂಗವು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಇಡೀ ದೇಶದಲ್ಲಿ ಶಿವಾಜಿ ಮಹಾರಾಜರಂತಹ ರಾಜರಿರಲಿಲ್ಲ. ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಯುದ್ಧನೀತಿ ಧೈರ್ಯ, ಶೌರ್ಯ, ಮಹಿಳೆಯರ ಗೌರವ, ಜಾತ್ಯತೀತ ಮನೋಭಾವನೆ ಇತರೇ ರಾಜರಲ್ಲಿ ಕಾಣುವುದು ತೀರ ಕಡಿಮೆ. ರೈತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಮೊಘಲರೊಂದಿಗೆ ಯುದ್ಧ ಮಾಡಿ ಗೆದ್ದಿದ್ದರು. ಗೆರಿಲ್ಲಾ ಯುದ್ಧ ಪರಿಣತರಾಗಿದ್ದರು. ತಾಯಿ ಜೀಜಾಮಾತಾ ಮಾರ್ಗದರ್ಶನದಲ್ಲಿ ರಾಷ್ಟ್ರಭಕ್ತಿ ಬೆಳೆಸಿಕೊಂಡ ಶಿವಾಜಿ ಬಾಲ್ಯದಿಂದಲೇ ರಾಮಾಯಣ, ಮಹಾಭಾರತ ಓದಿ ಸ್ವರಾಜ್ಯ ರಾಜ್ಯ ನಿರ್ಮಿಸಿದ್ದರು ಎಂದು ಸಚಿವರು ತಿಳಿಸಿದರು.

ಕರ್ನಾಟಕ-ಮಹಾರಾಷ್ಟ್ರದ ಸಂಬಂಧಗಳು ಶತಮಾನಗಳಿಂದಲೂ ಭಾತೃತ್ವ ರೀತಿಯಲ್ಲಿವೆ. ಶಿವಾಜಿಯ ತಂದೆಯ ಸಮಾಧಿ ದಾವಣಗೆರೆಯಲ್ಲಿದೆ. ಶಿವಾಜಿಯು ಕರ್ನಾಟಕದಲ್ಲಿ ಅನೇಕ ದಿನ ಉಳಿದು ಅನನ್ಯವಾದ ಸಂಬಂಧ ಹೊಂದಿದ್ದರು. ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇತ್ತೀಚೆಗೆ ಉತ್ತಮ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.

ಸಚಿವ ರಹೀಂ ಖಾನ್ ಅವರು ಮಾತನಾಡಿ, ಶಿವಾಜಿ ಮಹಾರಾಜರು ಈ ದೇಶ ಕಂಡ ಅತಿ ಶ್ರೇಷ್ಠ ಮಹಾಪುರುಷ. ಶಿವಾಜಿಯು ಯಾರ ವಿರುದ್ಧವೂ ಇರಲಿಲ್ಲ. ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು, ರಾಜ್ಯಭಾರ ಮಾಡುತ್ತಿದ್ದರು. ಅನೇಕ ದೊಡ್ಡ ಹುದ್ದೆಗಳನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಿದ್ದರು. ಸಮಾಜದಲ್ಲಿ ವೈವಿಧ್ಯತೆ ಇದೆ. ಬೀದರ್‌ನಲ್ಲಿ ಎಲ್ಲ ಸಮುದಾಯಗಳು ಶಾಂತಿ, ಸೌಹಾರ್ದದಿಂದ ಜೀವಿಸುತ್ತಿದ್ದಾರೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಧಾರಶಿವ ಮಾಜಿ ಸಂಸದ ಪ್ರೋ.ರವೀಂದ್ರ ವಿಶ್ವನಾಥರಾವ್‌ ಗಾಯಕವಾಡ, ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮುಖಂಡರಾದ ಬಂಡೆಪ್ಪ ಕಾಶೆಂಪುರ್‌, ಈಶ್ವರ ಸಿಂಗ್‌ ಠಾಕೂರ್‌, ಪ್ರಕಾಶ ಪಾಟೀಲ, ಮದನರಾವ್‌ ಬಿರಾದಾರ, ರಘುನಾಥ ಜಾಧವ, ಅರ್ಜುನ ಬಿಲ್ಲೆ, ಪಂಡಿತ ಜಾಧವ ಬಾಳೂರು ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.