ADVERTISEMENT

ಆರ್ಥಿಕಾಭಿವೃದ್ಧಿಗೆ ‘ಚಿಯಾ’ ವರದಾನ: ಪ್ರಗತಿಪರ ರೈತ ಸುಧಾಕರ ಫುಲಾರಿ ಸಾಧನೆ

6 ಎಕರೆಯಲ್ಲಿ 48 ಕ್ವಿಂಟಲ್ ಚಿಯಾ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:27 IST
Last Updated 22 ಫೆಬ್ರುವರಿ 2026, 0:27 IST
ಹುಲಸೂರ ಪಟ್ಟಣದ ರೈತ ಸುಧಾಕರ ಫುಲಾರಿ ತಮ್ಮ ಜಮೀನಿನಲ್ಲಿ ಬೆಳೆದ ವಾಣಿಜ್ಯ ಬೆಳೆ ‘ಚಿಯಾ’ ಧಾನ್ಯವನ್ನು ಪ್ರದರ್ಶಿಸಿದರು
ಹುಲಸೂರ ಪಟ್ಟಣದ ರೈತ ಸುಧಾಕರ ಫುಲಾರಿ ತಮ್ಮ ಜಮೀನಿನಲ್ಲಿ ಬೆಳೆದ ವಾಣಿಜ್ಯ ಬೆಳೆ ‘ಚಿಯಾ’ ಧಾನ್ಯವನ್ನು ಪ್ರದರ್ಶಿಸಿದರು   

ಹುಲಸೂರ: ಬಹು ಬೇಡಿಕೆ ಹೊಂದಿರುವ ಸಿರಿಧಾನ್ಯ ‘ಚಿಯಾ’ ಬೆಳೆದು ಗಮನ ಸೆಳೆದಿರುವ ಪಟ್ಟಣದ ಪ್ರಗತಿಪರ ರೈತ ಸುಧಾಕರ ಫುಲಾರಿ ಅವರು 6 ಎಕರೆಯಲ್ಲಿ 48 ಕ್ವಿಂಟಲ್‌ ಇಳುವರಿ ಪಡೆದು ಆರ್ಥಿಕವಾಗಿ ಯಶಸ್ಸಿನ ದಾರಿಯನ್ನು ಕಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾಚೆಗೆ ಯೋಚಿಸಿ ವಾಣಿಜ್ಯ ಕೃಷಿಗೆ ಮುಖ ಮಾಡಿದ ಅವರ ಪ್ರಯತ್ನ ಈಗ ಇತರ ರೈತರಿಗೆ ಮಾದರಿಯಾಗಿದೆ.

ರಾಗಿ ಮಾದರಿಯಲ್ಲೇ ಬೆಳೆಸಬಹುದಾದ ಚಿಯಾ ಬೆಳೆಯನ್ನು ತಮ್ಮ ಸರ್ವೆ ನಂ. 189ರಲ್ಲಿ ಬರುವ 6 ಎಕರೆಯ ಕಪ್ಪು ಮಣ್ಣಿನ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಮೈಸೂರಿನಿಂದ ತರಿಸಿದ ಗುಣಮಟ್ಟದ ಬೀಜವನ್ನು ಅಕ್ಟೋಬರ್‌ನಲ್ಲಿ ಬಿತ್ತಿದ್ದು, ಸುಮಾರು ಮೂರೂವರೆ ತಿಂಗಳಲ್ಲಿ ಉತ್ತಮ ಫಸಲು ದೊರೆತಿದೆ. ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ ₹19,500ಕ್ಕೂ ಹೆಚ್ಚು ದರ ಸಿಕ್ಕಿದ್ದು, ಈ ಬೆಳೆಯ ವಾಣಿಜ್ಯ ಮೌಲ್ಯವನ್ನು ಮತ್ತಷ್ಟು ದೃಢಪಡಿಸಿದೆ ಎಂದು ರೈತ ಸಂತೋಷ ವ್ಯಕ್ತಪಡಿಸುತ್ತಾರೆ.

‘ಬೆಳೆಯ ನಿರ್ವಹಣೆಗೆ ಹೆಚ್ಚಿನ ವೆಚ್ಚವಿಲ್ಲ. ಎಕರೆಗೆ 6ರಿಂದ 7 ಕ್ವಿಂಟಲ್‌ ಇಳುವರಿ ಬಂದಿದೆ. ತಾಲ್ಲೂಕಿನಲ್ಲಿ ತೊಗರಿ, ಉದ್ದು, ಹೆಸರು, ಸೋಯಾ ಮುಂತಾದ ಸಾಂಪ್ರದಾಯಿಕ ಬೆಳೆಗಳೇ ಹೆಚ್ಚಾಗಿದ್ದರೂ, ವಿಭಿನ್ನ ಬೆಳೆ ಪ್ರಯತ್ನಿಸಬೇಕೆಂಬ ಉದ್ದೇಶದಿಂದ ಚಿಯಾ ಬೇಸಾಯ ಆರಂಭಿಸಿದೆ’ ಎಂದು ಅವರು ತಿಳಿಸಿದರು.

ADVERTISEMENT

ಔಷಧೀಯ ಗುಣಲಕ್ಷಣಗಳು ಮತ್ತು ಪೌಷ್ಟಿಕಾಂಶದಿಂದ ಪ್ರಸಿದ್ಧವಾಗಿರುವ ಚಿಯಾ ಮೂಲತಃ ದಕ್ಷಿಣ ಅಮೆರಿಕ ದೇಶಗಳಿಂದ ಹರಡಿದ ಬೆಳೆ. ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಕಡಿಮೆ ಇರುವುದರಿಂದ ರೈತರಿಗೆ ನಿರಾಳ ಕೃಷಿಗೆ ಅನುಕೂಲಕರವಾಗಿದೆ. ಒಣ ಹವಾಮಾನದಲ್ಲಿ ವಾರಕ್ಕೊಮ್ಮೆ ತುಂತುರು ನೀರಾವರಿ ನೀಡಿದರೆ ಸಾಕು; 90ರಿಂದ 100 ದಿನಗಳಲ್ಲಿ ಫಸಲು ಪಡೆಯಬಹುದು. ಒಂದು ಎಕರೆಗೆ ಕೇವಲ 400–500 ಗ್ರಾಂ ಬೀಜ ಸಾಕಾಗುತ್ತದೆ. ಬೀಜ ವೆಚ್ಚ ₹900–₹1,000 ನಡುವೆ ಇದ್ದು, ಒಟ್ಟು ಖರ್ಚು ಎಕರೆಗೆ ₹4–₹5 ಸಾವಿರದೊಳಗೆ ನಿಗದಿಯಾಗುತ್ತದೆ.

ತಾಲ್ಲೂಕಿನಲ್ಲಿ ಇತ್ತೀಚೆಗೆ ಹೆಚ್ಚಿನ ರೈತರು ಚಿಯಾ ಬೆಳೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಪಾವಧಿಯಲ್ಲಿ ಲಾಭ ತರುವ ವಾಣಿಜ್ಯ ಬೆಳೆ ಎಂಬ ಕಾರಣದಿಂದ ಭವಿಷ್ಯದಲ್ಲಿ ಇದರ ವಿಸ್ತರಣೆ ಹೆಚ್ಚಾಗುವ ನಿರೀಕ್ಷೆಯಿದೆ. ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಸುಲಭವಾಗಿ ಬೆಳೆಸಬಹುದಾದ ಈ ಬೆಳೆಯು ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ನೀಡಬಲ್ಲದು ಎಂಬುದು ರೈತರ ಅಭಿಪ್ರಾಯ.

ಏನಿದು ಚಿಯಾ?: ದಕ್ಷಿಣ ಮೆಕ್ಸಿಕೊ ಮೂಲದ ಚಿಯಾ ವಿದೇಶಗಳಲ್ಲಿ ಉತ್ತಮ ಆರೋಗ್ಯ ಆಹಾರವಾಗಿ ಪರಿಗಣಿಸಲಾಗಿದೆ. ಬ್ರೆಡ್‌ ತಯಾರಿಕೆ ಹಾಗೂ ವಿವಿಧ ಪೌಷ್ಟಿಕ ತಿನಿಸುಗಳಲ್ಲಿ ಇದರ ಬಳಕೆ ಹೆಚ್ಚಾಗಿದೆ. ಸಿರಿಧಾನ್ಯಗಳ ಗುಂಪಿಗೆ ಸೇರಿದ ಈ ಬೆಳೆಗೆ ಮಾರುಕಟ್ಟೆ ಸಮಸ್ಯೆ ಎದುರಾಗುವುದಿಲ್ಲ; ಬೆಳೆದ ತಕ್ಷಣವೇ ರಾಜ್ಯದ ವಿವಿಧೆಡೆ ಮಾರಾಟವಾಗುತ್ತದೆ. ವೈವಿಧ್ಯಮಯ ಬೆಳೆಗಳಿಗೆ ಹೆಸರಾಗಿರುವ ಕೃಷಿಕರು ಮತ್ತು ಸೋಲಿಗರು ತಾಲ್ಲೂಕಿನಲ್ಲಿ ಚಿಯಾ ಬೆಳೆಯನ್ನು ಪರಿಚಯಿಸಿ ವಿಸ್ತರಿಸುವ ಪ್ರಯತ್ನದಲ್ಲಿದ್ದಾರೆ.

ಚಿಯಾ ಅಧಿಕೃತ ಬೆಳೆ. ಹೆಚ್ಚಿನ ಪೌಷ್ಟಿಕಾಂಶ ಇರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ರೈತರಿಗೆ ಉತ್ತಮ ಬೆಲೆ ಸಿಕ್ಕಿದ್ದು ಸಂತಸ ತಂದಿದೆ
- ಗೌತಮ, ಸಹಾಯಕ ಕೃಷಿ ನಿರ್ದೇಶಕ ಬಸವಕಲ್ಯಾಣ
ಚಿಯಾ ಸೇವನೆಯಿಂದ ಮೂಳೆ ಗಟ್ಟಿಯಾಗುವುದು ರಕ್ತದೊತ್ತಡ ಮತ್ತು ಸಕ್ಕರೆ ನಿಯಂತ್ರಣ ಸಾಧ್ಯ ಎಂದು ಹೇಳಲಾಗುತ್ತದೆ. ಹೀಗಾಗಿ ಸ್ಥಳೀಯ ಖರೀದಿ ಹೆಚ್ಚಾಗಿದೆ
- ಸುಧಾಕರ ಫುಲಾರಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.