ADVERTISEMENT

ಬೀದರ್: ನಾಲ್ಕು ತಿಂಗಳಲ್ಲಿ 23 ಬಾಲ್ಯ ವಿವಾಹ ತಡೆ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 3:26 IST
Last Updated 28 ಜುಲೈ 2021, 3:26 IST
ಬೀದರ್‌ನಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಉದ್ಘಾಟಿಸಿದರು. ಶಶಿಧರ ಕೋಸಂಬೆ, ಗೌರಿಶಂಕರ ಪ್ರತಾಪುರೆ, ರವೀಂದ್ರ ರತ್ನಾಕರ್, ಶಂಭುಲಿಂಗ ಹಿರೇಮಠ, ಗೋಪಾಲ್ ಬ್ಯಾಕೋಡ್ ಇದ್ದರು
ಬೀದರ್‌ನಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಉದ್ಘಾಟಿಸಿದರು. ಶಶಿಧರ ಕೋಸಂಬೆ, ಗೌರಿಶಂಕರ ಪ್ರತಾಪುರೆ, ರವೀಂದ್ರ ರತ್ನಾಕರ್, ಶಂಭುಲಿಂಗ ಹಿರೇಮಠ, ಗೋಪಾಲ್ ಬ್ಯಾಕೋಡ್ ಇದ್ದರು   

ಬೀದರ್: ಜಿಲ್ಲೆಯಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 23 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಶಂಭುಲಿಂಗ ಹಿರೇಮಠ ಹೇಳಿದರು.

ಇಲ್ಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಮತ್ತು ಬಾಲ ನ್ಯಾಯ ಮಾದರಿ ನಿಯಮ 2016 ರ ಅನುಷ್ಠಾನ ಮತ್ತು ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಣೆ ವಿರೋಧಿ ಘಟಕಗಳ ಮರು ಸ್ಥಾಪನೆ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಜನವರಿಯಿಂದ ಈವರೆಗೆ ಪೋಕ್ಸೊ ಕಾಯ್ದೆಯಡಿ 13 ಪ್ರಕರಣಗಳು ದಾಖಲಾಗಿವೆ. 10 ಮಂದಿ ಅತ್ಯಾಚಾರ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳಿಗಾಗಿ ಬಾಲ ನ್ಯಾಯ ಮಂಡಳಿಯಿಂದ ತಲಾ ₹10 ಸಾವಿರ ಕೊಡಲಾಗಿದೆ ಎಂದು ಹೇಳಿದರು.

ADVERTISEMENT

ಕೋವಿಡ್ ತುರ್ತು ಸಂದರ್ಭದಲ್ಲಿ ಮಕ್ಕಳ ಕ್ವಾರಂಟೈನ್‍ಗೆ 10 ಸಂಸ್ಥೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರವೀಂದ್ರ ರತ್ನಾಕರ್ ಅವರು ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಬಾಲ ಕಾರ್ಮಿಕ ನಿರ್ಮೂಲನಾ ಯೋಜನೆಯ ಯೋಜನಾ ವ್ಯವಸ್ಥಾಪಕ ಅರ್ಜುನ ಸಿತಾಳಗೇರಾ, ಮಹಿಳಾ ಪೊಲೀಸ್ ಠಾಣೆ ಸಿಪಿಐ ಯಶವಂತ ಬೀಸನಳ್ಳಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಅಧ್ಯಕ್ಷತೆ ವಹಿಸಿದ್ದರು.

ಡಿವೈಎಸ್‍ಪಿ ಕೆ.ಎಂ. ಸತೀಶ, ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಮಂಜುಳಾ ಎಂ ಉಪಸ್ಥಿತರಿದ್ದರು.

ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪ್ರತಾಪುರೆ ನಿರೂಪಿಸಿದರು. ರವಿರಾಜ ಭಮ್ಮಶೆಟ್ಟಿ ಸ್ವಾಗತಿಸಿದರು. ವಿನೋದ ಕುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.