ADVERTISEMENT

ಮಕ್ಕಳು ಸುಂದರ ಪರಿಸರದಲ್ಲಿ ಬೆಳೆಯುವಂತಾಗಲಿ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 5:46 IST
Last Updated 24 ಜನವರಿ 2026, 5:46 IST
ಬೀದರ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ ಉದ್ಘಾಟಿಸಿದರು
ಬೀದರ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ ಉದ್ಘಾಟಿಸಿದರು   

ಬೀದರ್‌: ‘ಹಲವೆಡೆಗಳಲ್ಲಿ ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿ, ಮಕ್ಕಳು ಸುಂದರ ಪರಿಸರದಲ್ಲಿ ಬೆಳೆಯುವಂತಾಗಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ ತಿಳಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಹಭಾಗಿದಾರ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಪ್ರಚಲಿತ ಮಕ್ಕಳ ಸಮಸ್ಯೆಗಳ’ ಕುರಿತು ಜಿಲ್ಲಾ, ತಾಲ್ಲೂಕು, ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ಒಂದು ದಿನದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಶ ಹಾಗೂ ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಅನೇಕ ಕಾಯ್ದೆ ಕಾನೂನುಗಳಿವೆ. ಆದರೆ, ಮಕ್ಕಳ ಮೇಲೆ ನಿರಂತರ ಕಿರುಕುಳ, ಹಲ್ಲೆ, ಶೋಷಣೆ, ದಬ್ಬಾಳಿಕೆ ನಡೆಯುತ್ತಲೇ ಇವೆ. ಎಲ್ಲರೂ ಮಕ್ಕಳ ಬದುಕು ಹಸನಾಗಿಸಲು ಶ್ರಮಿಸಬೇಕು. ಅವರ ಹಕ್ಕುಗಳ ರಕ್ಷಣೆ ಕಾಟಚಾರಕ್ಕೆ ಎಂಬಂತಾಗಬಾರದು ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ನಿತ್ಯ 12 ಪೋಕ್ಸೋ ಪ್ರಕರಣ ದಾಖಲಾಗುತ್ತಿವೆ. ಕಳೆದ ಐದು ವರ್ಷಗಳಲ್ಲಿ 16 ಸಾವಿರ ಪ್ರಕರಣ ದಾಖಲಾಗಿವೆ. ಆದರೆ, ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದು ಒಂದು ಸಾವಿರ ಪ್ರಕರಣಗಳಲ್ಲಿ. ಇದು ಅತ್ಯಂತ ಕಳವಳಕಾರಿ ಸಂಗತಿ. ಸೋಷಿಯಲ್ ಮೀಡಿಯಾದಿಂದ ಮಕ್ಕಳು ಬ್ಲ್ಯಾಕ್‌ಮೇಲ್‌ಗೆ ಒಳಗಾಗುತ್ತಿದ್ದಾರೆ. ರಾಜ್ಯದ ಹತ್ತು ಕಡೆಗಳಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಧಾರಣೆಗೆ ಒಳಗಾಗಿ ಶಾಲೆಯ ಶೌಚಾಲಯ, ಹಾಸ್ಟೆಲ್‌ ಸೇರಿ ಇತರೆ ಕಡೆಗಳಲ್ಲಿ ಅವರ ಹೆರಿಗೆಯಾದ ಘಟನೆಗಳು ನಡೆದಿವೆ. ಇದಕ್ಕೆ ಯಾರು ಹೊಣೆ? ಮಕ್ಕಳ ಹಕ್ಕುಗಳ ರಕ್ಷಣೆ ಸರ್ಕಾರದ ಅಥವಾ ಅಧಿಕಾರಿಗಳ ಕರ್ತವ್ಯವಲ್ಲ. ರಾಜ್ಯದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶರಣಪ್ಪ ಕಟ್ಟೆಪ್ಪಗೊಳ್ ಮಾತನಾಡಿ, ಒತ್ತಡ ಬದುಕಿನ ಮಧ್ಯೆ ನಾವು ನಮ್ಮ ಗುರುತರ ಜವಾಬ್ದಾರಿಗಳನ್ನು ಮರೆಯುತ್ತಿದ್ದೇವೆ. ಅದರಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕೂಡ ಒಂದು. ತಕ್ಷಣದಿಂದಲೇ ನಾವು ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡದಿದ್ದರೆ ನಮ್ಮ ಮಕ್ಕಳ ಭವಿಷ್ಯ ನಾವೇ ಹಾಳು ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸೀಮಪ್ಪ ಮಾತನಾಡಿ, ಪ್ರತಿಯೊಬ್ಬ ಮಗುವಿನ ಹಕ್ಕುಗಳ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ಅದನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು ಎಂದರು.

ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ. ಕೆ. ರಾಘವೇಂದ್ರ ಭಟ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್‌ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಎಂ.ಎಸ್., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ ಎಸ್. ಕೋಟೆಗೌಡರ್ ಪಾಲ್ಗೊಂಡಿದ್ದರು. ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.