
ಬೀದರ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಬಾಲ ಭವನದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಮಕ್ಕಳ ದಿನ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಉದ್ಘಾಟಿಸಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಮಕ್ಕಳಿಗೆ ಶಿಕ್ಷಣ, ಆರೋಗ್ಯ, ರಕ್ಷಣೆ, ಮೂಲಭೂತ ಸೌಕರ್ಯಗಳು ಒದಗಿಸಿ, ಅವರ ಎಲ್ಲಾ ಹಕ್ಕುಗಳನ್ನು ಕಾಪಾಡಬೇಕಿದೆ. ಅವರ ಉತ್ತಮ ಭವಿಷ್ಯ ರೂಪಿಸುವುದು ಬಹಳ ಮುಖ್ಯವಾದುದು ಎಂದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆ ರೂಪದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅವರಿಗೆ ಮಕ್ಕಳ ಮೇಲೆ ಅಗಾಧವಾದ ಪ್ರೀತಿ ಇತ್ತು. ಮಕ್ಕಳು ದೇಶದ ಮುಂದಿನ ಭವಿಷ್ಯ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.
ಮಕ್ಕಳು ಭವಿಷ್ಯದಲ್ಲಿ ಐಎಎಸ್, ಐಪಿಎಸ್, ವಿಜ್ಞಾನಿ, ವೈದ್ಯರು, ಶಿಕ್ಷಕರು, ಕ್ರೀಡಾಪಟು, ಉದ್ಯಮಿ ಸೇರಿದಂತೆ ಇತರೆ ಕನಸುಗಳನ್ನು ಇಟ್ಟುಕೊಂಡು ಓದಬೇಕು. ಮನೆಯೇ ಮೊದಲ ಪಾಠ ಶಾಲೆ ಆಗಿರುವುದರಿಂದ ಕುಟುಂಬದಿಂದ ಬಾಲ್ಯವನ್ನು ಕಾಪಾಡಿ, ಉತ್ತಮ ಸಂಸ್ಕಾರ, ಶಿಕ್ಷಣ, ಮೌಲ್ಯಗಳನ್ನು ನೀಡಿ, ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ ಎಂ.ಎಸ್., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೂಪಾ ಕೋಟೆಗೌಡರ್, ಶಿಶು ಅಭಿವೃದ್ಧಿ ಅಧಿಕಾರಿ ಶಾರದಾ ಕಲ್ಮಲಕರ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸುಭಾಷ್ ರತ್ನ, ಜಿಲ್ಲಾ ನಿರೂಪಣಾಧಿಕಾರಿ ಶ್ರೀಕಾಂತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.