ADVERTISEMENT

ಪುಲ್ವಾಮಾ ಯೋಧರ ಸಾವಿಗೆ ಚೌಕೀದಾರ ಕಾರಣ: ಗೃಹ ಸಚಿವ ಎಂ.ಬಿ. ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 13:45 IST
Last Updated 20 ಏಪ್ರಿಲ್ 2019, 13:45 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೀದರ್: ‘ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 42 ಸಿಆರ್‌ಪಿಎಫ್‌ ಯೋಧರ ಸಾವಿಗೆ ಚೌಕೀದಾರರೇ ಕಾರಣ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು.

‘ಕೇಂದ್ರ ಗುಪ್ತದಳದ ವೈಫಲ್ಯದಿಂದಾಗಿಯೇ ದೇಶದೊಳಗೆ 350 ಕೆ.ಜಿ. ಆರ್‌ಡಿಎಕ್ಸ್ ಬಂದಿತ್ತು. ಚೌಕೀದಾರ ಅವರು ಆರ್‌ಡಿಎಕ್ಸ್ ಬರದಂತೆ ತಡೆದಿದ್ದರೆ ಯೋಧರು ಜೀವ ಕಳೆದುಕೊಳ್ಳುತ್ತಿರಲಿಲ್ಲ’ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಪುಲ್ವಾಮಾ ಭಯೋತ್ಪಾದಕ ದಾಳಿಯ ವೈಫಲ್ಯವನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಅವರು ಬಾಲಾಕೋಟ್ ದಾಳಿಯನ್ನು ಪ್ರಸ್ತಾಪಿಸುತ್ತಿದ್ದಾರೆ. ಭಾರತೀಯ ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಐದು ವರ್ಷಗಳಲ್ಲಿ ಜನಸಾಮಾನ್ಯರು, ಯುವಕರು, ಸಣ್ಣ ವ್ಯಾಪಾರಿಗಳಿಗೆ ಒಳ್ಳೆಯ ದಿನಗಳು ಬಂದಿಲ್ಲ. ವಿಜಯ ಮಲ್ಯ, ನೀರವ್ ಮೋದಿ, ಚೋಕ್ಸಿ, ಲಲಿತ್ ಮೋದಿ, ಅನಿಲ ಅಂಬಾನಿ ಅಂತಹವರಿಗೆ ಮಾತ್ರ ಒಳ್ಳೆಯ ದಿನಗಳು ಬಂದವು. ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ದೇಶದಿಂದ ಪಲಾಯನ ಮಾಡಿದವರಿಗೆ ಚೌಕೀದಾರ ಏನೂ ಮಾಡಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಚುನಾವಣೆ ವೇಳೆ ನೀಡಿದ ಭರವಸೆಯಂತೆ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಜಮಾ ಆಗಲಿಲ್ಲ. 10 ಕೋಟಿ ಯುವಕರಿಗೆ ಉದ್ಯೋಗ ಕೊಡಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಅಧಿಕ ಮುಖಬೆಲೆಯ ನೋಟುಗಳ ರದ್ದತಿಯಿಂದ ವ್ಯಾಪಾರಿಗಳು ತೊಂದರೆ ಅನುಭವಿಸಿದರು’ ಎಂದು ದೂರಿದರು.

‘ನೋಟು ರದ್ದತಿಯ ನಂತರ ದೇಶದಲ್ಲಿ ಚಲಾವಣೆಯಲ್ಲಿ ಇದ್ದ ಮೊತ್ತದಷ್ಟೇ ಹಣ ಮರಳಿ ಬಂದಿತ್ತು. ಯಾವುದೇ ಕಪ್ಪು ಹಣ ಪತ್ತೆಯಾಗಲಿಲ್ಲ. ₹ 500 ಹಾಗೂ ₹ 2,000 ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಲು ₹ 40 ಸಾವಿರ ಕೋಟಿ ಖರ್ಚಾಯಿತು. ಜನಸಾಮಾನ್ಯರಿಗೆ ತೊಂದರೆಯಾಯಿತು. ಜಿಎಸ್‌ಟಿ ಸರಿಯಾಗಿ ಜಾರಿಗೊಳಿಸದಿದ್ದರಿಂದ ಉದ್ಯಮಿಗಳು ಹೈರಾಣಾದರು’ ಎಂದು ಹೇಳಿದರು.

‘ಬಿಜೆಪಿಯವರು 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ನೆಹರೂ ಸಶಕ್ತ ದೇಶ ಕಟ್ಟಲು ಪ್ರಯತ್ನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಹಸಿರು ಕ್ರಾಂತಿ ಮಾಡಿದರು. ಇಂದಿರಾಗಾಂಧಿ ಬಡತನ ನಿರ್ಮೂಲನೆಗೆ ಶ್ರಮಿಸಿದರು. ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು. ಭೂ ಕಾಯ್ದೆ ಜಾರಿಗೆ ತಂದರು. ಪಡಿತರ ಚೀಟಿ, ವಿಧವಾ, ವೃದ್ಧಾಪ್ಯ. ಅಂಗವಿಕಲರ ವೇತನ, ಆಶ್ರಯ ಮನೆ ಇಂದಿರಾ ಸಾಧನೆ’ ಎಂದು ತಿಳಿಸಿದರು.

‘ರಾಜೀವ್‌ಗಾಂಧಿ ಡಿಜಿಟಲ್ ಕ್ರಾಂತಿ ಮಾಡಿದರು. ನರಸಿಂಹರಾವ್ ಉದಾರೀಕರಣ ನೀತಿ ತಂದರು. ಮನಮೋಹನಸಿಂಗ್ ನರೇಗಾ, ಆರ್‌ಟಿಇ ಜಾರಿಗೆ ತಂದರು. ಆಹಾರ ಭದ್ರತೆ ಒದಗಿಸಿದರು. ರೈತರ ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು’ ಎಂದು ವಿವರಿಸಿದರು.

‘ಬೀದರ್ ಜಿಲ್ಲೆಯ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ, ಪರಿಹಾರ ಕಲ್ಪಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.