ADVERTISEMENT

ಅನುಭವ ಮಂಟಪಕ್ಕೆ 6ರಂದು ಸಿಎಂ ಅಡಿಗಲ್ಲು

ಮುಖ್ಯಮಂತ್ರಿ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 3:26 IST
Last Updated 4 ಜನವರಿ 2021, 3:26 IST
ಬಸವಕಲ್ಯಾಣದಲ್ಲಿ ಜನವರಿ 6ರಂದು ಮುಖ್ಯಮಂತ್ರಿ ಅವರಿಂದ ಶಂಕುಸ್ಥಾಪನೆ ನೆರವೇರಿಸಲಿರುವ ನೂತನ ಅನುಭವ ಮಂಟಪ ಕಾರ್ಯಕ್ರಮದ ಸ್ಥಳವನ್ನು ಸಚಿವ ಪ್ರಭು ಚವ್ಹಾಣ ಭಾನುವಾರ ಪರಿಶೀಲಿಸಿದರು
ಬಸವಕಲ್ಯಾಣದಲ್ಲಿ ಜನವರಿ 6ರಂದು ಮುಖ್ಯಮಂತ್ರಿ ಅವರಿಂದ ಶಂಕುಸ್ಥಾಪನೆ ನೆರವೇರಿಸಲಿರುವ ನೂತನ ಅನುಭವ ಮಂಟಪ ಕಾರ್ಯಕ್ರಮದ ಸ್ಥಳವನ್ನು ಸಚಿವ ಪ್ರಭು ಚವ್ಹಾಣ ಭಾನುವಾರ ಪರಿಶೀಲಿಸಿದರು   

ಬಸವಕಲ್ಯಾಣ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜನವರಿ 6ರಂದು ಇಲ್ಲಿ ನೂತನ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು ಬಸವಭಕ್ತರ ಬಹುದಿನದ ಕನಸು ನನಸಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದ್ದಾರೆ.

ಇಲ್ಲಿನ ತ್ರಿಪುರಾಂತ ಕೆರೆ ದಂಡೆಯಲ್ಲಿನ ಈಗಿರುವ ಅನುಭವ ಮಂಟಪದ ಆವರಣದಲ್ಲಿ ಭಾನುವಾರ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಈ ವಿಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ನೂತನ ಅನುಭವ ಮಂಟಪಕ್ಕೆ ₹600 ಕೋಟಿ ಅನುದಾನ ಮಂಜೂರು ಮಾಡಿ ₹100 ಕೋಟಿ ಬಿಡುಗಡೆ ಮಾಡಿದ್ದಾರೆ. ಕೊರೊನಾ ಲಾಕ್‌ಡೌನ್ ಕಾರಣ ಮಂಟಪದ ಶಂಕುಸ್ಥಾಪನಾ ಕಾರ್ಯಕ್ಕೆ ವಿಳಂಬ ಆಗಿದೆ. ಆದರೂ, ಮಹತ್ವದ ಕೆಲಸ ನನೆಗುದಿಗೆ ಬೀಳಬಾರದು ಎಂದು ಮಂಟಪಕ್ಕೆ ಅಡಿಗಲ್ಲು ಇಡುತ್ತಿದ್ದಾರೆ. ಕಾಂಗ್ರೆಸ್‌ನವರು ರಾಷ್ಟ್ರಪತಿಗಳಿಂದ ಅಡಿಗಲ್ಲು ಇಡುತ್ತೇವೆ ಎಂದು ಸುಳ್ಳು ಹೇಳಿದರು. ಆದರೆ, ಯಡಿಯೂರಪ್ಪನವರು ನುಡಿದಂತೆ ನಡೆಯುತ್ತಿದ್ದಾರೆ’ ಎಂದರು.

ADVERTISEMENT

‘ನೂತನ ಮಂಟಪ ಒಟ್ಟು 72 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದ್ದು ಬಹುಅಂತಸ್ತಿನ ಸುಂದರ ಹಾಗೂ ವಿಶಿಷ್ಟ ಕಟ್ಟಡ ಆಗಲಿದೆ. ಜತೆಗೆ ಆವರಣದಲ್ಲಿ ಉದ್ಯಾನ, ವಾಹನ ನಿಲುಗಡೆ ಸ್ಥಳ, ಪ್ರವಾಸಿ ಕೇಂದ್ರ, ಸಭಾಭವನ ಮುಂತಾದವು ನಿರ್ಮಾಣ ಆಗಲಿವೆ. ಕೇವಲ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದರು.

ವಿಶ್ವ ಬಸವಧರ್ಮ ಟ್ರಸ್ಟ್ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ದೇಶದ ಸಂಸತ್ತಿನ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ವರ್ಷವೇ ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಅನುಭವ ಮಂಟಪಕ್ಕೆ ಅಡಿಗಲ್ಲು ಇಡುತ್ತಿರುವುದು ಸಂತಸದ ಕ್ಷಣವಾಗಿದೆ. ಈ ಮಂಟಪ ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರ ಆಗಬೇಕು. ಅಲ್ಲದೇ, ಶಂಕುಸ್ಥಾಪನಾ ಕಾರ್ಯಕ್ರಮವೂ ಐತಿಹಾಸಿಕವಾಗಿ ನೆರವೇರಬೇಕು. ಆದ್ದರಿಂದ ಬಸವಪರ ಸಂಘಟನೆಯವರು ಕಾರ್ಯಕ್ರಮದಲ್ಲಿ ಒಮ್ಮನಸ್ಸಿನಿಂದ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೇಳಿಕೊಂಡರು.

ಭಾಲ್ಕಿ ಗುರುಬಸವ ಪಟ್ಟದ್ದೇವರು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡ ಬಾಬು ವಾಲಿ, ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ, ಪ್ರಮುಖರಾದ ಶರಣು ಸಲಗರ, ರವಿ ಚಂದನಕೆರೆ, ದೀಪಕ ಗಾಯಕವಾಡ, ಅಶೋಕ ವಕಾರೆ, ಕೃಷ್ಣಾ ಗೋಣೆ, ವಿಜಯಕುಮಾರ ಮಂಠಾಳೆ, ಅರವಿಂದ ಮುತ್ತೆ, ಶಂಕರ ನಾಗದೆ, ಶೋಭಾವತಿ ತೆಲಂಗ್ ಇದ್ದರು.

ಸ್ಥಳ ಪರಿಶೀಲನೆ: ಸಚಿವ ಪ್ರಭು ಚವಾಣ್ ಹಾಗೂ ಜಿಲ್ಲಾಧಿಕಾರಿ ಡಾ.ರಾಮಚಂದ್ರನ್ ಅವರು ಅಡಿಗಲ್ಲು ಸಮಾರಂಭ ನಡೆಯುವ ಸ್ಥಳವನ್ನು ಪರಿಶೀಲಿಸಿದರು. ಬೃಹತ್ ಸಭಾ ಮಂಟಪ ಸಿದ್ಧಪಡಿಸಲು ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕೈಗೊಳ್ಳಲು ಸಂಬಂಧಿತರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.