ಬೀದರ್: ಬೀದರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಕಾಮಗಾರಿಗೆ, ಔರಾದ್ ಶಾಸಕ ಪ್ರಭು ಚವ್ಹಾಣ್ ಅವರು ಮರು ಚಾಲನೆ ನೀಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ಔರಾದ್‍ನ ಮುಖಂಡ ದೀಪಕ ಪಾಟೀಲ ಚಾಂದೋರಿ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಏಪ್ರಿಲ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀದರ್‌ನಲ್ಲಿ ₹ 2,025 ಕೋಟಿ ವೆಚ್ಚದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.ಅದರಲ್ಲಿ ಒಟ್ಟು ₹2 ಕೋಟಿ ವೆಚ್ಚದ ಕಮಲನಗರ ತಾಲ್ಲೂಕಿನ ಚಾಂದೋರಿ, ಮದನೂರು ಹಾಗೂ ಬೀದರ್ ತಾಲ್ಲೂಕಿನ ಕುತ್ತಾಬಾದ್‍ನ ಎಎನ್‍ಎಂ ಕ್ವಾಟ್ರಸ್ ಕಾಮಗಾರಿಗಳು ಸೇರಿದ್ದವು. ಚಾಂದೋರಿಯಲ್ಲಿ ಎಎನ್‍ಎಂ ಕ್ವಾಟ್ರಸ್ ಕಾಮಗಾರಿಗೆ ಶಾಸಕರು ಸೋಮವಾರ ಮರುಚಾಲನೆ ನೀಡಿದ್ದಾರೆ ಎಂದು ಆಪಾದಿಸಿದ್ದಾರೆ.
ಮುಖ್ಯಮಂತ್ರಿ ಚಾಲನೆ ನೀಡಿದ ಕಾಮಗಾರಿಗಳಿಗೆ ಮರುಚಾಲನೆ ನೀಡಿದ ಉದಾಹರಣೆಗಳಿಲ್ಲ. ಆದರೆ, ಔರಾದ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಚಾಲನೆ ನೀಡಿ 6 ತಿಂಗಳಾದರೂ ಕಾಮಗಾರಿ ಆರಂಭಿಸದೆ ವಿಳಂಬ ಮಾಡಲಾಗಿದೆ. ಮರು ಚಾಲನೆ ವೇಳೆ ಮುಖ್ಯಮಂತ್ರಿ ಅವರು ಕಾಮಗಾರಿಗೆ ಚಾಲನೆ ನೀಡುವಾಗ ಹಾಜರಿದ್ದ ಅಧಿಕಾರಿಗಳು, ಶಾಸಕರು ಚಾಲನೆ ಕೊಡುವಾಗಲೂ ಹಾಜರಿದ್ದರು ಎಂಬುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.
ಶಾಸಕರು ಕಾಮಗಾರಿಗೆ ಮರು ಚಾಲನೆ ಕೊಟ್ಟು ಮುಖ್ಯಮಂತ್ರಿ ಹುದ್ದೆಗೆ ಅಗೌರವ ತೋರಿದ್ದಾರೆ. ಶಿಷ್ಟಾಚಾರದ ಎಲ್ಲ ಎಲ್ಲೆಗಳನ್ನು ಮೀರಿದ್ದಾರೆ. ಔರಾದ್ ಕ್ಷೇತ್ರದಲ್ಲಿ ಎಲ್ಲ ಕಾರ್ಯಗಳಲ್ಲೂ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದನ್ನು ಮತ್ತೊಮ್ಮೆ ತೋರ್ಪಡಿಸಿದ್ದಾರೆ. ಜಿಲ್ಲೆಯ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ರೀತಿಯ ನಿಯಮಗಳಿದ್ದರೆ, ಔರಾದ್ ಕ್ಷೇತ್ರದಲ್ಲಿ ಬೇರೆ ರೀತಿಯ ನಿಯಮಗಳೇ ಇವೆ. ಕ್ಷೇತ್ರದಲ್ಲಿ ಏಕಚಕ್ರಾಧಿಪತ್ಯ ಹಾಗೂ ಭ್ರಷ್ಟಾಚಾರ ತಾಂಡವವಾಗುತ್ತಿದೆ. ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಚಾಲನೆ ಕೊಟ್ಟರೂ ಕಾಮಗಾರಿ ಪ್ರಾರಂಭಿಸದಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಆಪಾದಿಸಿದ್ದಾರೆ.
ಮುಖ್ಯಮಂತ್ರಿ ಚಾಲನೆ ಕೊಟ್ಟ ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.