ADVERTISEMENT

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಒಂದು ದೊಡ್ಡ ನಾಟಕ

ಮಾಜಿ ಶಾಸಕ ಅಶೋಕ ಖೇಣಿ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 15:46 IST
Last Updated 21 ಜೂನ್ 2019, 15:46 IST
ಅಶೋಕ ಖೇಣಿ
ಅಶೋಕ ಖೇಣಿ   

ಬೀದರ್‌: ‘ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಒಂದು ದೊಡ್ಡ ನಾಟಕ. ಅಭಿವೃದ್ಧಿಯ ನೆಪದಲ್ಲಿ ಮುಖ್ಯಮಂತ್ರಿ ಅವರು ವೈಯಕ್ತಿಕ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಅಭಿವೃದ್ಧಿಗಿಂತ ವಾಸ್ತವ್ಯಕ್ಕೆ ಅಧಿಕ ಹಣ ಪೋಲಾಗುತ್ತಿದೆ’ ಎಂದು ಮಾಜಿ ಶಾಸಕ ಅಶೋಕ ಖೇಣಿ ಟೀಕಿಸಿದರು.

‘ಕುಮಾರಸ್ವಾಮಿ ಮತ್ತು ಬಿ.ಎಸ್‌.ಯಡಿಯೂರಪ್ಪ ಅವರು ಗ್ರಾಮ ವಾಸ್ತವ್ಯ ಮಾಡಿದ ಒಂದು ಗ್ರಾಮವೂ ಪರಿಪೂರ್ಣವಾಗಿ ಸುಧಾರಣೆಯಾಗಿಲ್ಲ. ಗ್ರಾಮ ವಾಸ್ತವ್ಯದ ಕಾರಣ ಜಿಲ್ಲಾ ಮಟ್ಟದ ಅಧಿಕಾರಿಗಳು ಒಂದೇ ಗ್ರಾಮವನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಬೇರೆ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ’ ಎಂದು ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಗ್ರಾಮ ವಾಸ್ತವ್ಯದ ನಾಟಕದಲ್ಲಿ ನಾನು ಪಾತ್ರ ವಹಿಸುವುದಿಲ್ಲ. ಅಭಿವೃದ್ಧಿಯ ನೆಪದಲ್ಲಿ ನಾಟಕ ಮಾಡಿದರೆ ಮುಂದೊಂದು ದಿನ ಜನ ಉಗಿಯುತ್ತಾರೆ. ಕಾಂಗ್ರೆಸ್‌ ಮುಖಂಡನಾಗಿ ನಾನು ಈ ಹೇಳಿಕೆ ಕೊಡುತ್ತಿಲ್ಲ. ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ. ಇದು ಸರ್ಕಾರದ ವಿರೋಧಿ ಹೇಳಿಕೆ ಎಂದು ಭಾವಿಸಿ ಕಾಂಗ್ರೆಸ್‌ ವರಿಷ್ಠರು ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಗ್ರಾಮಕ್ಕೆ ಬರುವ ಮೊದಲೇ ಅನಗತ್ಯವಾಗಿ ₹ 50 ಲಕ್ಷ ಖರ್ಚಾಗುತ್ತಿದೆ. ಇದರಿಂದ ಯಾರಿಗೂ ಅನುಕೂಲ ಆಗುತ್ತಿಲ್ಲ. ಇದೇ ಹಣವನ್ನು ಕುಡಿಯುವ ನೀರಿನ ಶಾಶ್ವತ ಯೋಜನೆಗೆ ಬಳಸಿಕೊಂಡರೆ ಒಂದು ಗ್ರಾಮವಾದರೂ ಉದ್ಧಾರವಾಗುತಿತ್ತು. ಗ್ರಾಮ ವಾಸ್ತವ್ಯದ ದಿನ ಮುಖ್ಯಮಂತ್ರಿ ಹೊರಗಿನಿಂದ ತರಿಸಿದ ಆಹಾರ ಸೇವಿಸಿ ಮಜಾ ಮಾಡಿ ಹೋಗುತ್ತಿದ್ದಾರೆ.’ ಎಂದು ಹೇಳಿದರು.

‘ಗೌತಮ ಬುದ್ಧ, ಚಂದ್ರಗುಪ್ತ ಹಾಗೂ ಮಹಾತ್ಮ ಗಾಂಧಿ ಅವರೂ ಗ್ರಾಮ ವಾಸ್ತವ್ಯ ಮಾಡಿದ್ದರು. ನಾಡಿನ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುವುದು ಅವರ ಮೂಲ ಉದ್ದೇಶವಾಗಿತ್ತು. ಆದರೆ ಇಲ್ಲಿ ಹಾಗಾಗುತ್ತಿಲ್ಲ. ಮುಖ್ಯಮಂತ್ರಿ ಗ್ರಾಮಕ್ಕೆ ಬರುವ ಮೊದಲೇ ಅಧಿಕಾರಿಗಳು ಕಚೇರಿ ಕೆಲಸ ಬಿಟ್ಟು ಹಲವಾರು ಬಾರಿ ಗ್ರಾಮಕ್ಕೆ ಓಡುತ್ತಿದ್ದಾರೆ. ಇದರಿಂದ ಕಚೇರಿ ಕೆಲಸಗಳು ಆಗುತ್ತಿಲ್ಲ’ ಎಂದು ಕಟುವಾಗಿ ಟೀಕಿಸಿದರು.

‘ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮದಿಂಂದ 10 ಗ್ರಾಮಕ್ಕೆ ಹೋಗುವಂತಹ ಹಣ ಒಂದೇ ಗ್ರಾಮಕ್ಕೆ ಹೋಗುತ್ತದೆ. ಟಿವಿಯಲ್ಲಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮುಖ್ಯಮಂತ್ರಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ನೀರು ಇಲ್ಲದಿದ್ದರೆ ನಾಗರಿಕತೆ ಮುಂದುವರಿಯುವುದಿಲ್ಲ. ಹೀಗಾಗಿ ಮೊದಲು ಗ್ರಾಮಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಒಂದು ಹಳ್ಳಿ ಅಥವಾ ಒಂದು ಜಿಲ್ಲೆಯನ್ನು ಮಾದರಿಯಾಗಿ ತೆಗೆದುಕೊಂಡರೆ ಏನು ಪ್ರಯೋಜನ. ಇಡೀ ರಾಜ್ಯ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರಾಜ್ಯದ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ತಾನೊಬ್ಬ ಉದಾರ ವ್ಯಕ್ತಿ, ದಯಾಳು ಎಂದು ಬಿಂಬಿಸಿಕೊಳ್ಳಲು ಗ್ರಾಮ ವಾಸ್ತವ್ಯದ ನಾಟಕ ನಡೆಸಿದ್ದಾರೆ’ ಎಂದು ಟೀಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.