
ಬಸವಕಲ್ಯಾಣ: ‘ಪರಿಹಾರ ಧನ ವಿತರಣೆಯಲ್ಲಿ ತಾರತಮ್ಯ ನಡೆದಿದೆ. ಭಾಲ್ಕಿ ರೈತರ ಖಾತೆಗೆ ಹಣ ಜಮೆ ಮಾಡಿ ತಕ್ಷಣ ಸಹಾಯ ಒದಗಿಸಲಾಗಿದ್ದು, ಬಸವಕಲ್ಯಾಣ ತಾಲ್ಲೂಕಿನವರಿಗೆ ಇದುವರೆಗೆ ಪರಿಹಾರ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ದೂರಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಒಂದು ವೇಳೆ ಶೀಘ್ರ ಪರಿಹಾರದ ಹಣ ನೀಡದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಈ ತಾಲ್ಲೂಕಿನವರಿಗೆ ಹಣ ಏಕೆ ಕೊಡುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಸ್ಥಳೀಯ ಮುಖಂಡ ವಿಜಯಸಿಂಗ್ ಅವರೂ ಈ ಬಗ್ಗೆ ಮೌನವಾಗಿರುವುದೇಕೆ? ಶಾಸಕ ಶರಣು ಸಲಗರ ಅವರು ಪ್ರತಿಭಟನಾ ಮೆರವಣಿಗೆ ನಡೆಸಿ ಮೈಗೆ ಬಾರುಕೋಲಿನಿಂದ ಹೊಡೆದುಕೊಂಡರು. ಆದರೆ, ಹಾನಿ ಸಮೀಕ್ಷೆಗಾಗಿ ಯಾವುದೇ ಇಲಾಖೆ ಅಧಿಕಾರಿಗಳೊಂದಿಗೆ ಒಂದು ಸಲವೂ ಸಭೆ ನಡೆಸಿಲ್ಲ. ಅವರದೇ ಪಕ್ಷದ ಸರ್ಕಾರ ಕೇಂದ್ರದಲ್ಲಿದ್ದರೂ ಈ ಬಗ್ಗೆ ಮನವಿ ಸಲ್ಲಿಸಿಲ್ಲ’ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ಡಾ.ಜಿಯಾಪಾಶಾ ಉಪಸ್ಥಿತರಿದ್ದರು.
‘ನಗರದಲ್ಲಿನ ರಸ್ತೆ ಹಾಳಾಗಿ ಅಪಘಾತಗಳು ಸಂಭವಿಸುತ್ತಿದ್ದರೂ ಮತ್ತು ನಗರಸಭೆಯಲ್ಲಿ ಅವ್ಯವಹಾರ ನಡೆಯುತ್ತಿದ್ದರೂ ನಗರ ನಿವಾಸಿಗಳು ಕಣ್ಣುಮುಚ್ಚಿ ಕುಳಿತಿರುವುದು ಸರಿಯಲ್ಲ’ ಎಂದು ನಗರಸಭೆ ಕಾರ್ಯವೈಖರಿ ಬಗ್ಗೆ ಮಲ್ಲಿಕಾರ್ಜುನ ಖೂಬಾ ಆಕ್ರೋಶ ವ್ಯಕ್ತಪಡಿಸಿದರು. ‘ನಗರದಲ್ಲಿ ನೂರಾರು ಸಂಘ ಸಂಸ್ಥೆಗಳಿವೆ. ಹೋರಾಟಗಾರರು ಇದ್ದಾರೆ. ಆದರೂ ಈ ಬಗ್ಗೆ ಯಾರೂ ಪ್ರತಿಭಟನೆಗೆ ಮುಂದಾಗದಿರುವುದು ದುರ್ದೈವ. ಎಲ್ಲರೂ ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡು ಒಂದೆರಡು ಗಂಟೆಯಾದರೂ ಅಂಗಡಿ ವ್ಯಾಪಾರ ಬಂದ್ ಇಟ್ಟು ಪ್ರತಿಭಟಿಸಬೇಕು. ರಸ್ತೆಗಳಲ್ಲಿನ ತಗ್ಗುಗುಂಡಿಗಳಿಂದ ಬಡವರ ಅಟೋಗಳ ಟೈರ್ ಮತ್ತು ಬಿಡಿಭಾಗಗಳು ಹಾಳಾಗುತ್ತಿವೆ. ದ್ವಿಚಕ್ರ ವಾಹನಗಳು ಕೆಟ್ಟು ನಿಲ್ಲುತ್ತಿವೆ. ದೂಳು ಏಳುತ್ತಿದೆ. ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ’ ಎಂದರು. ‘ಕೆಲ ದಿನಗಳ ಹಿಂದೆ ನಾನು ಸ್ವತಃ ಮಣ್ಣಿನ ಬುಟ್ಟಿ ತಲೆಮೇಲೆ ಹೊತ್ತುಕೊಂಡು ಕೆಲ ತಗ್ಗುಗಳನ್ನು ಮುಚ್ಚಿದ್ದೇನೆ. ಆದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿದ್ದೇನೆ. ಅವರೂ ಕ್ರಮ ತೆಗೆದುಕೊಂಡಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.