ADVERTISEMENT

ನಾನು ಮತ್ತು ಖಂಡ್ರೆ ಇಲ್ಲದೆ ಕಾಂಗ್ರೆಸ್ ರಥ ನಡೆಯದು: ರಾಜಶೇಖರ ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:58 IST
Last Updated 9 ಜುಲೈ 2025, 5:58 IST
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಧನರಾಜ ತಾಳಂಪಳ್ಳಿ ಹಾಗೂ ಇತರೆ ಅತಿಥಿಗಳಿಗೆ ಪುಷ್ಪಮಾಲೆ ಹಾಕಿ ಸನ್ಮಾನಿಸಲಾಯಿತು. ಮಾಜಿ ಸಚಿವ ರಾಜಶೇಖರ ಪಾಟೀಲ ಇದ್ದರು
ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಧನರಾಜ ತಾಳಂಪಳ್ಳಿ ಹಾಗೂ ಇತರೆ ಅತಿಥಿಗಳಿಗೆ ಪುಷ್ಪಮಾಲೆ ಹಾಕಿ ಸನ್ಮಾನಿಸಲಾಯಿತು. ಮಾಜಿ ಸಚಿವ ರಾಜಶೇಖರ ಪಾಟೀಲ ಇದ್ದರು   

ಬಸವಕಲ್ಯಾಣ: ‘ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾಂಗ್ರೆಸ್ಸಿನ ಎರಡು ಗಾಲಿಗಳಿದ್ದಂತೆ. ಇಬ್ಬರೂ ಇಲ್ಲದಿದ್ದರೆ ಪಕ್ಷದ ರಥ ನಡೆಯದು’ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಹೇಳಿದ್ದಾರೆ.

ನಗರದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಘಟಕದ ನೂತನ ಅಧ್ಯಕ್ಷ ಧನರಾಜ ತಾಳಂಪಳ್ಳಿ ಅವರ ಸನ್ಮಾನ ಹಾಗೂ ಸಹಕಾರ ಸಂಗ್ರಾಮ ಅಭಿಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಕ್ಷದ ವರಿಷ್ಠರು ಗಮನಿಸಲೆಂದು ಈಚೆಗೆ ಕೆಲ ಸಮಸ್ಯೆಗಳನ್ನು ಮಂಡಿಸಿರುವುದಕ್ಕೆ ಅಪಾರ್ಥ ಕಲ್ಪಿಸಲಾಗುತ್ತಿದೆ. ಬೆಂಗಳೂರಿಗೆ ಬಂದಿದ್ದ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಸಮಯ ನೀಡಿದ್ದರಿಂದ ಅವರೆದುರು ನನ್ನ ಅಭಿಪ್ರಾಯ ತಿಳಿಸಿದ್ದು ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ’ ಎಂದರು.

ADVERTISEMENT

‘ಹಿಂದಿನ ಅಭ್ಯರ್ಥಿಗಳಾದ ವಿಜಯಸಿಂಗ್, ಮಾಲಾ ನಾರಾಯಣರಾವ್ ಮತ್ತು ಸಹಕಾರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಧನರಾಜ ತಾಳಂಪಳ್ಳಿ ಒಳಗೊಂಡು ಕೆಲವರು ಈ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಆದರೂ ಒಗ್ಗೂಡಿ ಪಕ್ಷ ಕಟ್ಟಬೇಕಾಗಿದೆ. ತಾಳಂಪಳ್ಳಿಯವರು ಉತ್ತಮ ಕಾರ್ಯಗೈದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರೀತಿಗೆ ಪಾತ್ರರಾಗಬೇಕು’ ಎಂದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮಾತನಾಡಿ, ‘ಕಾಂಗ್ರೆಸ್ ಕಾರ್ಯಕರ್ತರಿಗೆ ಈಶ್ವರ ಖಂಡ್ರೆ ಮತ್ತು ರಾಜಶೇಖರ ಪಾಟೀಲ ಇವರಲ್ಲಿ ಒಬ್ಬರನ್ನೂ ಬಿಟ್ಟಿರಲು ಸಾಧ್ಯ ಆಗುವುದಿಲ್ಲ. ಮಾಜಿ ಶಾಸಕ ದಿ.ನಾರಾಯಣರಾವ್ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಧನರಾಜ ತಾಳಂಪಳ್ಳಿ ಕೂಡ ಪಕ್ಷದ ಸಂಘಟನೆ ಬಲಗೊಳಿಸಬೇಕು’ ಎಂದರು.

ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ ಮಾತನಾಡಿ, ‘ಧನರಾಜ ತಾಳಂಪಳ್ಳಿಯವರು ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದು ಜನಸೇವೆ ಮಾಡುತ್ತಿದ್ದಾರೆ. ಮುಂದೆ ಇವರು ಶಾಸಕರಾಗಿಯೂ ಆಯ್ಕೆ ಆಗಲಿ’ ಎಂದರು.

ಧನರಾಜ ತಾಳಂಪಳ್ಳಿ ಮಾತನಾಡಿ, ‘ಬಸವಭೂಮಿಯಿಂದ ಇಂದಿನಿಂದ ಸದಸ್ಯತ್ವ ಅಭಿಯಾನ ಆರಂಭಿಸಿ ರಾಜ್ಯಾದ್ಯಂತ ಪಕ್ಷ ಬಲಪಡಿಸಲಾಗುವುದು’ ಎಂದರು.

ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರವಿಂದಕುಮಾರ ಅರಳಿ, ಕೆ.ಪುಂಡಲೀಕರಾವ್ ಮಾತನಾಡಿದರು. ಮುಖಂಡರಾದ ಮನೋಹರ ಮೈಸೆ, ಬಂಡೆಪ್ಪ ಮೇತ್ರೆ, ಚಂದ್ರಕಾಂತ ಮೇತ್ರೆ, ಗುರುನಾಥ ದುರ್ಗೆ, ರಾಜನ್ ಚೌಧರಿ, ಬಸವಣ್ಣಪ್ಪ ನೆಲ್ಲೋಗಿ, ಕೇಶಪ್ಪ ಬಿರಾದಾರ, ಸದಾನಂದ ಹಳ್ಳೆ, ವೀರಣ್ಣ ಪಾಟೀಲ, ಜ್ಞಾನೇಶ್ವರ ಶಿಂಧೆ, ಕವಿರಾಜ, ಯಾಹ್ಯಾ ಪಾಶಾ, ಈಶ್ವರ ಬೊಕ್ಕೆ ಮತ್ತಿತರರು ಉಪಸ್ಥಿತರಿದ್ದರು. 

ಈಶ್ವರ ಖಂಡ್ರೆ ತಂದೆ ಹಾಗೂ ರಾಜಶೇಖರ ಪಾಟೀಲ ತಾಯಿಯಂತಿದ್ದಾರೆ. ಇಬ್ಬರ ಮಧ್ಯೆ ಕೂಸು ಬಡವ ಎನ್ನುವಂತೆ ಕಾರ್ಯಕರ್ತರ ಸ್ಥಿತಿ ಆಗದಂತೆ ಇವರು ಕಾಳಜಿ ವಹಿಸಬೇಕು
-ಮಾಲಾ ನಾರಾಯಣರಾವ್, ಅಧ್ಯಕ್ಷೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ

ಬೈಕ್‌ ರ್‍ಯಾಲಿ

ಸಸ್ತಾಪುರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಧನರಾಜ ತಾಳಂಪಳ್ಳಿ ಅವರನ್ನು ಸ್ವಾಗತಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ವೇದಿಕೆಗೆ ಕರೆತರಲಾಯಿತು. ಅನೇಕ ಯುವಕರು ಬೈಕ್ ರ್‍ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.