ADVERTISEMENT

ಸಂವಿಧಾನ ಬದಲಾವಣೆಯಾದರೆ ದೇಶ ಉಳಿಯದು

ಸಂವಿಧಾನ ಅಂಗೀಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ವಿಠ್ಠಲದಾಸ ಪ್ಯಾಗೆ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 13:25 IST
Last Updated 30 ನವೆಂಬರ್ 2022, 13:25 IST
ಔರಾದ್ ತಾಲ್ಲೂಕಿನ ಸಂತಪುರದಲ್ಲಿ ನಡೆದ ಸಂವಿಧಾನ ಅಂಗೀಕಾರ ದಿನ‌ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು
ಔರಾದ್ ತಾಲ್ಲೂಕಿನ ಸಂತಪುರದಲ್ಲಿ ನಡೆದ ಸಂವಿಧಾನ ಅಂಗೀಕಾರ ದಿನ‌ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು   

ಔರಾದ್: ‘ಕೆಲವರಿಂದ ಸಂವಿಧಾನ ಬದಲಾವಣೆ ಮಾತು ಕೇಳಿ ಬರುತ್ತಿದೆ. ಹಾಗೇನಾದರೂ ಆದರೆ ದೇಶ ಉಳಿಯುವುದಿಲ್ಲ’ ಎಂದು ನಿವೃತ್ತ ಪ್ರಾಂಶುಪಾಲ ವಿಠ್ಠಲದಾಸ ಪ್ಯಾಗೆ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂತಪುರದಲ್ಲಿ ಬುಧವಾರ ನಡೆದ ಸಂವಿಧಾನ ಅಂಗೀಕಾರ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕೆಲವರು ಮನು ಬರೆದ ಸಂವಿಧಾನ ತರಲು ಹೊರಟಿದ್ದಾರೆ. ಅದು ಶೋಷಿತರನ್ನು ಮತ್ತಷ್ಟು ಶೋಷಿತರನ್ನಾಗಿ ಮಾಡುತ್ತದೆ. ಮಹಿಳೆಯರಿಗೆ ಓದು- ಬರಹ ಸೇರಿದಂತೆ ಬಟ್ಟೆ ತೊಡಲು ಕಟ್ಟಪ್ಪಣೆ ವಿಧಿಸುತ್ತದೆ. ಆದರೆ ಇಂದಿನ ಭಾರತೀಯ ಸಂವಿಧಾನ ಸ್ತ್ರೀ ಸಮಾನತೆ ನೀಡುವ ಮೂಲಕ ಪುರುಷರೊಂದಿಗೆ ಸಮಾನವಾಗಿ ಬದುಕುವ ಎಲ್ಲ ಹಕ್ಕು ನೀಡಿದೆ ಎಂದರು.

ADVERTISEMENT

ಸಂವಿಧಾನ ವಿರೋಧಿಸುವ ಹಾಗೂ ಸುಡುವವರಿಗೆ ಪ್ರಸ್ತುತ ಇರುವ ಸಂವಿಧಾನದಿಂದ ಆಗುವ ತೊಂದರೆಗಳೇನು ಎಂದು ಕೇಳಬೇಕು ಹಾಗೂ ಈ ಕುರಿತು ಸಾರ್ವಜನಿಕರ ಚರ್ಚೆಗೆ ಬರಬೇಕು ಎಂದು ಒತ್ತಾಯಿಸಿದರು.

ಸಮಾನತೆ, ಸಹೋದರತೆ, ಭ್ರಾತೃತ್ವದ ಭಾವನೆ ಸಂವಿಧಾನದಿಂದ ಮಾತ್ರ ಹುಟ್ಟಲು ಸಾಧ್ಯ. ಪ್ರಜಾಪ್ರಭುತ್ವ ದೇಶಕ್ಕೆ ಜಾತಿಪ್ರೇಮ ತುಂಬಾ ಅಪಾಯಕಾರಿಯಾಗಿದೆ ಎಂದರು.

ಧರ್ಮಗಳ ಮೇಲೆ ಸ್ಥಾಪಿತವಾದ ಯಾವ ದೇಶಗಳೂ ಸುಖಿಯಾಗಿ ಉಳಿದಿಲ್ಲ. ಆದರೆ ಜಾತ್ಯತೀತ ದೇಶ ಭಾರತದಲ್ಲಿ ಜನ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಹಕ್ಕುಗಳಿಂದ ಸೌಹಾರ್ದದಿಂದ ಬದುಕಲು ಸಂವಿಧಾನವೇ ಮೂಲ ಕಾರಣ ಎಂದು ಹೇಳಿದರು.

ಜಾತಿಯ ಕಾರಣದಿಂದಾಗಿ ಅಂಬೇಡ್ಕರ್ ರಚಿತ ಸಂವಿಧಾನವನ್ನು ಒಪ್ಪಿಕೊಳ್ಳಲು ಕೆಲವರು ಹಿಂಜರಿಯುತ್ತಾರೆ ಎಂದು‌ ಕಳವಳ ವ್ಯಕ್ತಪಡಿಸಿದರು.

ಹಸಿವಿನ ಸೂಚ್ಯಂಕದಲ್ಲಿ ಭಾರತ ಮುಂಚೂಣಿಯಲ್ಲಿದ್ದರೂ ಭಾರತವನ್ನು ವಿಶ್ವಗುರು ಅಂಥ ಹೇಳುವುದು ಸರ್ಕಾರದ ಹಾಸ್ಯಾಸ್ಪದ ನಡೆ ಎಂದರು.

ಯುವ ಸಾಹಿತಿ ನಂದಾದೀಪ ಬೋರಾಳೆ ಹಾಗೂ ಪರಮೇಶ್ವರ ವಿಳಾಸಪುರೆ ಮಾತನಾಡಿದರು.

ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಹಿರಿಯ ಮುಖಂಡ ಶಂಕರರಾವ್ ದೊಡ್ಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಧನರಾಜ ಮುಸ್ತಾಪುರೆ ಅಧ್ಯಕ್ಷತೆ ವಹಿಸಿದ್ದರು.

ಚಿತ್ರನಟ ಹಣ್ಮುಪಾಜಿ, ಪಿಎಸ್ಐ ಸಿದ್ದಣ್ಣ ಗಿರಿಗೌಡರ್, ಪಿಡಿಒ ಸಂತೋಷಕುಮಾರ ಪಾಟೀಲ, ಸತೀಶ್ ವಗ್ಗೆ, ಪ್ರಾಂಶುಪಾಲ ಶಿವರಾಜ ಜುಕಾಲೆ, ನವೀಲಕುಮಾರ ಉತ್ಕಾರ್, ಮುಖ್ಯ ಶಿಕ್ಷಕರಾದ ಮನೋಹರ ಬಿರಾದಾರ, ಕರುಣಕರ್ ಭಾವಿಕಟ್ಟಿ, ಅಜಯ ದುಬೆ, ಶಿವಾಜಿ ಪವಾರ್, ಶಿಕ್ಷಕ ಶಿವಾಜಿ ಚಿಟಗಿರೆ, ನಾಡ ತಹಶೀಲ್ದಾರ್ ಪ್ರೇಮದಾಸ ಬೋರಾಳೆ, ಪ್ರಮುಖರಾದ ಗಣಪತಿ ವಾಸುದೇವ, ತುಕಾರಾಮ ಹಸನಮುಖಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.