ಬೀದರ್: ಸತತ ಐದು ದಿನ ಬಿಡುವು ಕೊಡದೆ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ ಅಸಂಖ್ಯ ಗುಂಡಿಗಳು ಬಿದ್ದಿವೆ.
ಜು.20ರಿಂದ ಆರಂಭಗೊಂಡ ಮಳೆ ಜು.27ರವರೆಗೆ ಸುರಿದಿದೆ. ಜು.20, 21 ಕೆಲಕಾಲ ಮಳೆಯಾದರೆ, ಜು. 22ರಿಂದ 26ರ ವರೆಗೆ ಆಕಾಶಕ್ಕೆ ತೂತು ಬಿದ್ದಂತೆ ಹಗಲು–ರಾತ್ರಿಯೆನ್ನದೆ ಜಿಟಿಜಿಟಿ ಮಳೆಯಾಗಿದೆ. ನಡು ನಡುವೆ ಬಿರುಸಾಗಿ ಸುರಿದಿದೆ. ಭಾನುವಾರ ಕೂಡ ಬಿಟ್ಟು ಬಿಟ್ಟು ಮಳೆ ಸುರಿದಿದೆ.
ಜೂನ್ ಸಂಪೂರ್ಣ ತಿಂಗಳು ಹಾಗೂ ಜುಲೈ ಎರಡನೇ ವಾರದವರೆಗೆ ಜಿಲ್ಲೆ ಕೊರತೆ ಮಳೆಗೆ ಸಾಕ್ಷಿಯಾಗಿದೆ. ಆದರೆ, ಜುಲೈ ಮೂರನೇ ವಾರ ಸುರಿದ ಮಳೆಗೆ ರಸ್ತೆಗಳು ಬಾಯ್ತೆರೆದುಕೊಂಡಿವೆ. ಒಂದೋ ಎರಡೋ ಗುಂಡಿ ಬಿದ್ದರೆ ಏನೋ ಆಗಿರಬಹುದು ಎಂದು ಸಮಾಧಾನ ಪಟ್ಟು ಓಡಾಡಬಹುದು. ಆದರೆ, ರಸ್ತೆ ತುಂಬ ಗುಂಡಿಗಳಿದ್ದರೆ ಓಡಾಡುವುದು ಹೇಗೆ? ಈಗ ಇದೇ ವಿಷಯ ಸಾರ್ವಜನಿಕರ ಕೋಪಕ್ಕೆ ಗುರಿಯಾಗುವಂತೆ ಮಾಡಿದೆ.
ಜಿಲ್ಲೆಯ ಪ್ರಮುಖ ಮುಖ್ಯ ರಸ್ತೆಗಳನ್ನು ನೋಡಿದರೆ ‘ಆಹಾ’ ಎಂತಹ ರಸ್ತೆ ನಿರ್ಮಿಸಿದ್ದಾರೆ ಎಂದು ಒಂದು ಕ್ಷಣ ಅನಿಸುತ್ತೆ. ಆದರೆ, ಮುಖ್ಯರಸ್ತೆಗಳಿಂದ ಮಳೆ ನೀರು ಸುಗಮವಾಗಿ ಹರಿದು ಹೋಗುವುದಿಲ್ಲ. ಇದರಿಂದ ಮಳೆ ಬಂದಾಗಲೆಲ್ಲಾ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಸಾರ್ವಜನಿಕರ ಓಡಾಟಕ್ಕೆ ತೊಡಕಾಗುತ್ತಿದೆ. ಇನ್ನು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುಃಸ್ಥಿತಿ ಹೇಳತೀರದಷ್ಟು ಹಾಳಾಗಿವೆ. ಅಲ್ಲಿ ನಿತ್ಯ ಓಡಾಡುವವರಿಗಷ್ಟೇ ಅದರ ಸಂಕಟ ಅರ್ಥವಾಗುತ್ತದೆ.
ನಗರದ ಆದರ್ಶ ಕಾಲೊನಿ, ಮೈಲೂರ ಮುಖ್ಯರಸ್ತೆ, ಮೈಲೂರ ಮೌನೇಶ್ವರ ದೇಗುಲದಿಂದ ಗುಂಪಾ ರಸ್ತೆ, ದೇವಿ ಕಾಲೊನಿ, ಜ್ಯೋತಿ ಕಾಲೊನಿ, ಬಸವನಗರ, ಕೆಎಚ್‌ಬಿ ಕಾಲೊನಿ ಸೇರಿದಂತೆ ಹಲವೆಡೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಯಾರು ಕೂಡ ಅವುಗಳ ದುರಸ್ತಿಗೆ ತಲೆ ಕೆಡಿಸಿಕೊಂಡಿಲ್ಲ. ಜನ ಗೊಣಗಿಕೊಂಡು ಅದರಲ್ಲೇ ಓಡಾಡುತ್ತಿದ್ದಾರೆ ವಿನಃ ಅದರ ವಿರುದ್ಧ ಪ್ರತಿಭಟಿಸುವುದಾಗಲಿ, ಪ್ರಶ್ನಿಸುವ ಗೋಜಿಗೆ ಹೋಗಿಲ್ಲ.
ಭಾರಿ ಮಳೆ ಸುರಿದರೆ ಹಾರೂರಗೇರಿ ಕಮಾನ್ ಎದುರಿನ ಮನ್ನಳ್ಳಿ ಮುಖ್ಯರಸ್ತೆಯಲ್ಲಿ ಹಳ್ಳದಂತೆ ನೀರು ಹರಿಯುತ್ತದೆ. ರಾಮಚೌಕ್, ಕುಂಬಾರವಾಡ ಕ್ರಾಸ್, ಬೊಮ್ಮಗೊಂಡೇಶ್ವರ ವೃತ್ತದ ಬಳಿಯೂ ಪರಿಸ್ಥಿತಿ ಭಿನ್ನವಾಗಿಲ್ಲ.
‘ತವರು ಕ್ಷೇತ್ರದ ಶಾಸಕರೇ ಪೌರಾಡಳಿತ ಸಚಿವರಾಗಿದ್ದರೂ ನಗರದಲ್ಲಿ ರಸ್ತೆಗಳ ಪರಿಸ್ಥಿತಿ ಸರಿ ಇಲ್ಲ. ಸಚಿವರಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯ ಕಳೆದರೂ ಒಂದು ದಿನವೂ ನಗರದಲ್ಲಿ ಓಡಾಡಿ ಜನರಿಗಾಗುತ್ತಿರುವ ಸಮಸ್ಯೆ ಅರ್ಥೈಸಿಕೊಂಡು ಅದಕ್ಕೆ ಪರಿಹಾರ ಕಲ್ಪಿಸಿಲ್ಲ. ಹೆಸರಿಗೆ ಮಹಾನಗರ ಪಾಲಿಕೆ ಮಾಡಿದ್ದೇವೆ ಎಂದು ಹೇಳಿಕೊಂಡು ಓಡಾಡಿದರೆ ಏನು ಪ್ರಯೋಜನ. ಮಹಾನಗರಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳು ಆಗಬೇಕಲ್ಲ’ ಎಂದು ಸ್ಥಳೀಯರಾದ ಸಂಗಮೇಶ, ವಿನಯ್, ಸಂಜುಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಜೂನ್ ಒಂದರಿಂದ ಇದುವರೆಗೆ ಒಟ್ಟು 59 ಮನೆಗಳಿಗೆ ಮಳೆಯಿಂದ ಹಾನಿ ಉಂಟಾಗಿದೆ. ಇದರಲ್ಲಿ ಆರು ಜಾನುವಾರುಗಳು ಸಾವನ್ನಪ್ಪಿವೆ. ಭಾಲ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಾಂಜ್ರಾ ನದಿ ನೀರಿನ ಪ್ರವಾಹದಲ್ಲಿ ಇಬ್ಬರು ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ.
ಬೀದರ್ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಲ್ಲಿ (ಜು. 20ರಿಂದ ಜು.26ರ ತನಕ) ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ವಾಡಿಕೆ ಪ್ರಕಾರ 51 ಮಿ.ಮೀ ಮಳೆಯಾಗಬೇಕು. ಆದರೆ 62 ಮಿ.ಮೀ. ವರ್ಷಧಾರೆಯಾಗಿದೆ. ‘ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ಬೆಳೆಗಳಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ತಗ್ಗು ಪ್ರದೇಶದ ಜಮೀನುಗಳಲ್ಲಿ ಅಲ್ಲಲ್ಲಿ ನೀರು ಸಂಗ್ರಹಗೊಂಡಿದೆ. ಸೋಯಾ ಅವರೆ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿರುವುದರಿಂದ ಈ ಮಳೆಗೆ ಏನೂ ಸಮಸ್ಯೆ ಆಗಲ್ಲ’ ಎಂದು ಕೃಷಿ ಇಲಾಖೆಯ ಅಧಿಕಾರಿ ಕೈಲಾಸನಾಥ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯ ಮುಂದುವರೆದಿದೆ. ಸಮೀಕ್ಷೆ ಮುಗಿದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ–ಸುರೇಖಾ, ಹೆಚ್ಚುವರಿ ಜಿಲ್ಲಾಧಿಕಾರಿ ಬೀದರ್
ಸತತ ಮಳೆಯಿಂದ ಬಡಾವಣೆಗಳಲ್ಲಿ ರಸ್ತೆಗಳೆಲ್ಲ ಹಾಳಾಗಿದ್ದು ಓಡಾಡುವುದು ಬಹಳ ಕಷ್ಟವಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿದ್ದು ತುರ್ತಾಗಿ ಸರಿಪಡಿಸಬೇಕು–ಸಂಜೀವಕುಮಾರ ಸಜ್ಜನ್, ವಕೀಲರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.