ADVERTISEMENT

ಅಮರೇಶ್ವರ ಅದ್ದೂರಿ ಜಾತ್ರೆಗೆ ಸಹಕರಿಸಿ: ಶಾಸಕ ಪ್ರಭು ಚವ್ಹಾಣ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 5:01 IST
Last Updated 25 ಫೆಬ್ರುವರಿ 2025, 5:01 IST
ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಅಮರೇಶ್ವರ ಜಾತ್ರಾ ಸಿದ್ಧತಾ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಅವರು ಜಾನುವಾರು ಪ್ರದರ್ಶನದ ಭಿತ್ತಿ ಪತ್ರ ಬಿಡುಗಡೆ ಮಾಡಿದರು
ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಅಮರೇಶ್ವರ ಜಾತ್ರಾ ಸಿದ್ಧತಾ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಅವರು ಜಾನುವಾರು ಪ್ರದರ್ಶನದ ಭಿತ್ತಿ ಪತ್ರ ಬಿಡುಗಡೆ ಮಾಡಿದರು   

ಔರಾದ್: ‘ಮಹಾಶಿವರಾತ್ರಿ ನಿಮಿತ್ತ ಉದ್ಭವ ಅಮರೇಶ್ವರ ಜಾತ್ರಾಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು’ ಎಂದು ಶಾಸಕ ಪ್ರಭು ಚವ್ಹಾಣ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಗಡಿ ಭಾಗದಲ್ಲಿ ನಡೆಯುವ ದೊಡ್ಡ ಜಾತ್ರೆಯಾಗಿದೆ. ಹೊರ ರಾಜ್ಯಗಳ ಭಕ್ತರು ಪಾಲ್ಗೊಳ್ಳುತ್ತಾರೆ. ಹೀಗಾಗಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ಕಡೆ ಬೀದಿದೀಪ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

‘ಕುಸ್ತಿ ಹಾಗೂ ಪಶುಪ್ರದರ್ಶನ ಜಾತ್ರೆಯ ವಿಶೇಷ ಕಾರ್ಯಕ್ರಮ. ಇದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಎಪಿಎಂಸಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಜಾತ್ರೆಗಳು ನಮ್ಮ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ಪ್ರತಿಬಿಂಬ. ಹೀಗಾಗಿ ಜಾತಿ–ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳಬೇಕು. ಈಗ ಬೇಸಿಗೆ ಇರುವುದರಿಂದ ಕುಡಿಯಲು ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಮಾತನಾಡಿ, ‘ಜಾತ್ರೆಗಾಗಿ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಹಾಗೂ ಬೇರೆ ಬೇರೆ ಕಡೆಯಿಂದ ಕಲಾವಿದರನ್ನು ಆಹ್ವಾನಿಸಲಾಗಿದೆ. ದೇವಸ್ಥಾನದ ಸುಣ್ಣಬಣ್ಣ ಹಾಗೂ ದೀಪಾಲಂಕಾರ ಪೂರ್ಣ ಆಗಿದೆ. ಭಕ್ತರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಘುಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡ ಸಂತೋಷ ಪೋಕಲವಾರ, ದಯಾನಂದ ಘುಳೆ, ಸಂಜು ವಡೆಯರ, ಕೇರಬಾ ಪವಾರ, ಗುಂಡಪ್ಪ ಮುದಾಳೆ, ಯಾದು ಮೇತ್ರೆ, ಬನ್ಸಿಲಾಲ್ ಖೀರಾನಾಯಕ, ಮುಖ್ಯಾಧಿಕಾರಿ ಸ್ವಾಮಿದಾಸ, ಶಿರಸ್ತೇದಾರ ಶ್ರೀದೇವಿ, ಜೆಸ್ಕಾಂ ಎಂಜಿನಿಯರ್ ರವಿ ಕಾರಬಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಜಾತ್ರೆಯ ಅಂಗವಾಗಿ 25ರಂದು ಸಂಗೀತ ದರ್ಬಾರ, 26ರಂದು ಅಗ್ನಿಪೂಜೆ, 27ರಂದು ರಥೋತ್ಸವ, 28ರಂದು ಕುಸ್ತಿ, ಮಾರ್ಚ್ 3ರಂದು ಪಶು ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.