ADVERTISEMENT

ನಾಶ ಮಾಡುವ ಕೋಪ ನಿಯಂತ್ರಿಸಿ

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 14:27 IST
Last Updated 1 ಆಗಸ್ಟ್ 2022, 14:27 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಬೀದರ್‌: “ಕೋಪ ಎಂಬುದು ಪಾಪದ ನೆಲೆಗಟ್ಟು” ಎಂದು ಸರ್ವಜ್ಞ ಕವಿ ಹೇಳುತ್ತಾರೆ. “ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ” ಚೆನ್ನಬಸವಣ್ಣನವರು ಎಚ್ಚರಿಸಿದ್ದಾರೆ. ಕೋಪವೆಂದರೆ ಕಾರಣಾಂತರದಿಂದ ಮನಸ್ಸಿಗೆ ನೋವಾಗಿ ಜೋರಾಗಿ ರೇಗಾಡುವುದು ಕೋಪ. “ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರುವುದಿಲ್ಲ” ಎಂಬ ನುಡಿ ಇದೆ. ಆದರೆ ಇಂದು ವೈದ್ಯರು ಕೋಪದಿಂದ ಕಳೆದುಕೊಂಡ ಆರೋಗ್ಯ ಮರಳಿ ಬರುವುದಿಲ್ಲ ಎಂದು ಎಚ್ಚರಿಸುತ್ತಿದ್ದಾರೆ. `ಸಿಟ್ಟು ತನ್ನ ವೈರಿ’ ಯಾಗಿದೆ. ಇದರಿಂದ ಬಿ.ಪಿ.ಹೃದಯಾಘಾತ ಮುಂತಾದ ಕಾಯಿಲೆಗಳು ಬರುತ್ತವೆ. ವಿಜ್ಞಾನಿಗಳು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಕೋಪದಿಂದ ಮನಸ್ಸು ಮತ್ತು ಶರೀರದ ಆರೋಗ್ಯ ನಾಶವಾಗುತ್ತದೆ. ಸೇಡಿನ ಮನೋಭಾವ ಹೆಚ್ಚಾಗಿ ನಕಾರಾತ್ಮಕ ಭಾವನೆಗಳು ಬೆಳೆಯುತ್ತವೆ. ಶರೀರದಲ್ಲಿ ಹೃದಯಬಡಿತ ಹೆಚ್ಚಾಗಿ ಅಪಾಯಕ್ಕೆ ಕಾರಣವಾಗುತ್ತದೆ.

ಮಕ್ಕಳು ಓದಲಾರದೆ ಇದ್ದಾಗ ಕೋಪ ಮಾಡಿಕೊಂಡು ಸಹಜವಾಗಿ ಸರಿದಾರಿಗೆ ತರುವ ಉದ್ದೇಶ ಇರಬೇಕು. ದುರುದ್ದೇಶದಿಂದ ದ್ವೇಷಪೂರಿತ ಕೋಪ ಇರಬಾರದು. “ತನುವಿನ ಕೋಪ ತನ್ನ ಹಿರಿಯತನದ ಕೇಡು ಮನದ ಕೋಪ ತನ್ನ ಅರುಹಿನ ಕೇಡು” ಬಸವಣ್ಣನವರು ನಮ್ಮನ್ನು ಎಚ್ಚರಿಸಿದ್ದಾರೆ. “ಕೋಪವೆನ್ನುವುದು ಕೈಯಲ್ಲಿ ಉರಿಯುವ ಇಜ್ಜಲು ಹಿಡಿದುಕೊಂಡು ಇನ್ನೊಬ್ಬರ ಮೈಮೇಲೆ ಎಸೆಯಲು ಪ್ರಯತ್ನ ಮಾಡಿದಂತೆ” ಎಂದು ಬುದ್ದ ಮಹಾತ್ಮರು ಹೇಳುತ್ತಾರೆ. ಹಾಗಾದರೆ ನಮ್ಮನ್ನು ನಾಶಮಾಡುವ ಕೋಪವನ್ನು ನಿಯಂತ್ರಿಸಲೇಬೇಕು.

ಕೋಪ ಬರುವ ಸನ್ನಿವೇಶಗಳಿಂದ ಆದಷ್ಟು ದೂರ ಇರಬೇಕು. ಮನಸ್ಸನ್ನು ಆಧ್ಯಾತ್ಮ ಚಿಂತನೆಗಳ ಕಡೆ ತಿರುಗಿಸಬೇಕು. ಆತುರದ ಅವರಸರದ ನಿರ್ಧಾರ ತೆಗೆದುಕೊಳ್ಳಬಾರದು. ಭಕ್ತಿಗೀತೆ, ವಚನಗಳು ಹಾಡುತ್ತಿರಬೇಕು. ಸಂಗೀತಮಯದಿಂದ ಹಾಡಿದ ವಚನಗಳು ಕೇಳುತ್ತಿರಬೇಕು. ಮಹಾತ್ಮರ ಜೀವನ ಸಂದೇಶಗಳು ಮೆಲಕು ಹಾಕುತ್ತ ಇರಬೇಕು. ನಮ್ಮ ಸಿಟ್ಟು ನಿಯಂತ್ರಣಕ್ಕೆ ಬರುತ್ತದೆ. ಅಕ್ಕಮಹಾದೇವಿಯವರು ಹೇಳುತ್ತಾರೆ “ಈ ಲೋಕದಲ್ಲಿ ಹುಟ್ಟಿರ್ದಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು” ಸಮಾಧಾನ ನೆಮ್ಮದಿಯೇ ದೊಡ್ಡ ಸಂಪತ್ತು ಅದುವೇ ನಮ್ಮ ಆಸ್ತಿ. ಅದನ್ನು ಸಾಧಿಸಿದರೆ ಜೀವನದಲ್ಲಿ ಸದಾ ಆನಂದವಾಗಿರುತ್ತದೆ. ಅದುವೇ ನಿಜವಾದ ಸುಖ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.