ADVERTISEMENT

ನಮ್ಮನ್ನು ನಮ್ಮ ರಾಜ್ಯಕ್ಕೆ ಕಳುಹಿಸಿ

ಖಟಕ ಚಿಂಚೋಳಿ: ಕುಟುಂಬಸ್ಥರನ್ನು ಸೇರಲು ಬೇಕಿದೆ ಅಧಿಕಾರಿಗಳ ನೆರವು

ಬಸವರಾಜ ಎಸ್.ಪ್ರಭಾ
Published 9 ಮೇ 2020, 9:27 IST
Last Updated 9 ಮೇ 2020, 9:27 IST
ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಲಿಕುಂಠಿ ಮಠ ಸಮೀಪದಲ್ಲಿರುವ ಬಿಹಾರ ರಾಜ್ಯದ ಕಾರ್ಮಿಕರು
ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಲಿಕುಂಠಿ ಮಠ ಸಮೀಪದಲ್ಲಿರುವ ಬಿಹಾರ ರಾಜ್ಯದ ಕಾರ್ಮಿಕರು   

ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಲಿಕುಂಠಿ ಮಠ ಸಮೀಪದಲ್ಲಿರುವ ಬಿಹಾರ ರಾಜ್ಯದ 18 ಜನ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಮರಳಲು ತವಕಿಸುತ್ತಿದ್ದು, ಅಧಿಕಾರಿ, ಜನಪ್ರತಿನಿಧಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಬಿಹಾರ ಮೂಲದ ಒಟ್ಟು 43 ಕಾರ್ಮಿಕರು ಸುಮಾರು ತಿಂಗಳುಗಳಿಂದ ಹುಲಿಕುಂಠಿ ಮಠದ ಬಳಿ ನಡೆಯುತ್ತಿರುವ ಸಣ್ಣ ನೀರಾವರಿ ಯೋಜನೆ ಅಡಿ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಸುಮಾರು 18 ಕಾರ್ಮಿಕರು ತಮ್ಮ ತವರು ಗ್ರಾಮಗಳಿಗೆ ವಾಪಸ್ ತೆರಳಲು ತಮ್ಮ ಕೆಲಸ ಬಿಟ್ಟು ಕುಳಿತಿದ್ದಾರೆ.

ಬಿಹಾರ ರಾಜ್ಯದ ಕಟಿಯಾರ್, ಪೂರ್ಣಿಯಾ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸೇರಿದವರಾದ ನಾವು ಹೆಂಡತಿ, ಮಕ್ಕಳು, ಕುಟುಂಬಸ್ಥರನ್ನು ಬಿಟ್ಟು ಬಂದು ಸುಮಾರು ಆರು ತಿಂಗಳಾಯಿತು. ಇನ್ನೇನು ಸ್ವಗ್ರಾಮಗಳಿಗೆ ತೆರಳಿ ಮನೆಯ ಸದಸ್ಯರ ಜೊತೆ ಕೆಲ ಕಾಲ ಆರಾಮವಾಗಿ ಕಾಲ ಕಳೆಯಬೇಕು ಎನ್ನುವಷ್ಟರಲ್ಲಿಯೇ ಕೊರೊನಾ ವೈರಾಣುವನ್ನು ತಡೆಯಲು ಸರ್ಕಾರ ಲಾಕ್‍ಡೌನ್ ಘೋಷಿಸಿದ್ದರಿಂದ ಅನಿವಾರ್ಯವಾಗಿ ಇಲ್ಲಿಯೇ ಉಳಿದುಕೊಂಡೆವು. ಇಲ್ಲಿ ಊಟಕ್ಕೆ, ವಾಸಕ್ಕೆ ನಮಗೆ ಯಾವುದೇ ತೊಂದರೆ ಇಲ್ಲ. ಈಗ ಇತರ ರಾಜ್ಯಗಳಿಗೆ ಹೋಗಲು ಸೇವಾಸಿಂಧು ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಲು ಸೂಚಿಸಿದ್ದಾರೆ. ಆದರೆ, ಈ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಾರ್ಮಿಕರಾದ ಚಂದನಕುಮಾರ, ಪಿಂಕು ಕುಮಾರ ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ಸಹಾಯ ಕೇಳಲು ಗುರುವಾರ ತೆರಳಿದ್ದೇವು. ಅಲ್ಲಿನ ಅಧಿಕಾರಿಗಳು ಬಿಹಾರ ರಾಜ್ಯಕ್ಕೆ ತೆರಳುವವರ ಸವಿವರವಾದ ಮಾಹಿತಿ ಕೊಡಿ ಎಂದು ಕೇಳಿದ್ದಕ್ಕೆ ಅದನ್ನೂ ನೀಡಿದ್ದೆವು. ಈಗ ಎರಡ್ಮೂರು ದಿನಗಳಲ್ಲಿ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ. ಮನೆ ಸೇರಬೇಕೆಂಬ ವ್ಯಾಕುಲತೆ ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ. ಹೆಂಡತಿ, ಮಕ್ಕಳ ನೆನಪು ನಮ್ಮನ್ನು ಸದಾ ಕಾಲ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮದೊಂದು ವಿಶೇಷ ಪ್ರಕರಣ ಎಂದಾದರೂ ಭಾವಿಸಿ, ತವರು ರಾಜ್ಯಕ್ಕೆ ತೆರಳಲು ಅನುಮತಿಸಿ, ಉಚಿತ ಸಾರಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಕಾರ್ಮಿಕರು ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.