ADVERTISEMENT

ಎಷ್ಟು ಹೇಳಿದ್ರೂ ಅಂತರ ಕಾಯ್ದುಕೊಳ್ಳುತ್ತಿಲ್ಲ

ಪಡಿತರ ಅಂಗಡಿಗಳಲ್ಲಿ ಮುಗಿ ಬೀಳುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 15:57 IST
Last Updated 5 ಏಪ್ರಿಲ್ 2020, 15:57 IST
ಬೀದರ್‌ನ ಗಾಂಧಿಗಂಜ್‌ನಲ್ಲಿರುವ ಪಡಿತರ ಅಂಗಡಿಯಲ್ಲಿ ಪಡಿತರ ಪಡೆಯಲು ಮುಗಿಬಿದ್ದ ಜನರು
ಬೀದರ್‌ನ ಗಾಂಧಿಗಂಜ್‌ನಲ್ಲಿರುವ ಪಡಿತರ ಅಂಗಡಿಯಲ್ಲಿ ಪಡಿತರ ಪಡೆಯಲು ಮುಗಿಬಿದ್ದ ಜನರು   

ಬೀದರ್: ಕೊರೊನಾ ವೈರಸ್‌ ಹರಡುವಿಕೆ ತಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಯಾರಿಗೂ ತೊಂದರೆ ಆಗದಿರಲಿ ಎಂದು ಪ್ರತಿಯೊಂದು ಕುಟುಂಬಕ್ಕೆ ಪಡಿತರ ಧಾನ್ಯವನ್ನೂ ಕೊಡುತ್ತಿದೆ. ಆದರೆ, ಜನ ಮಾತ್ರ ಜಿಲ್ಲಾಡಳಿತ ಮನವಿಗೆ ಸ್ಪಂದಿಸುತ್ತಿಲ್ಲ.

ಶನಿವಾರ ತಾಲ್ಲೂಕು ಪಂಚಾಯಿತಿ ಕಚೇರಿ ಸಮೀಪದ ಎಸ್‌ಬಿಐ ಗ್ರಾಹಕರ ಸೇವಾ ಕೇಂದ್ರದ ಮುಂದೆ ಸುಣ್ಣದಿಂದ ಮಾರ್ಕ್‌ ಮಾಡಿದ್ದರೂ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೆಯೇ ನಿಂತಿದ್ದರು. ಗ್ರಾಹಕ ಸೇವಾದ ಸಿಬ್ಬಂದಿ ಎಚ್ಚರಿಕೆ ನೀಡಿದ ಮೇಲೆ ಸ್ವಲ್ಪ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತರು.

ಓಲ್ಡ್‌ ಸಿಟಿಯಲ್ಲಿ ಕೆಲ ಪ್ರದೇಶದಲ್ಲಿ ಎರಡು ದಿನಗಳಿಂದ ದಿನಸಿ ಹಾಗೂ ಹಾಲು ಸಿಗುತ್ತಿಲ್ಲ. ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅವರ ಮನವಿಯ ಮೇರೆಗೆ ದಾನಿಗಳು ಕೊಳೆಗೇರಿ ಪ್ರದೇಶಕ್ಕೆ ಹೋಗಿ ಹಾಲು ವಿತರಿಸಿದರು. ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ಹಾಲಿನ ಪಾಕೆಟ್‌ಗಳನ್ನು ಪಡೆದು ಮನೆಗಳಿಗೆ ತೆರಳಿದರು.

ADVERTISEMENT

ಗ್ರಾಹಕರು ಕೈಗಳನ್ನು ಸರಿಯಾಗಿ ತೊಳೆದುಕೊಳ್ಳದೆ ತರಕಾರಿಗಳನ್ನು ಮೇಲೆ ಕೆಳಗೆ ಮಾಡಿ ತರಕಾರಿ ಖರೀದಿಸುತ್ತಿದ್ದಾರೆ. ಸೋಂಕಿನ ಗಂಭೀರತೆ ಅರಿತಿರುವ ವ್ಯಕ್ತಿಗಳು ಮಾತ್ರ ಕೈಗಾಡಿಗಳಲ್ಲಿ ಬರುವ ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ

ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು ದಿನಗಳಿಂದ ಎಲ್ಲ ವರ್ಗದವರಿಗೂ ಸರ್ಕಾರದ ಆದೇಶದಂತೆ 10 ಕೆಜಿ ಅಕ್ಕಿ ಹಾಗೂ ನಾಲ್ಕು ಕೆ.ಜಿ ಗೋಧಿಯನ್ನು ವಿತರಿಸಲಾಗುತ್ತಿದೆ. ಜನ ಎಷ್ಟು ಹೇಳಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಡಿತರ ಪಡೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ಏಪ್ರಿಲ್ 10ರ ವರೆಗೆ ನಿತ್ಯ ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆವರೆಗೆ ಪಡಿತರ ವಿತರಿಸಲಾಗುವುದು. ಎಪಿಎಲ್, ಬಿಪಿಲ್ ಹಾಗೂ ಅಂತ್ಯೋದಯ ಕಾರ್ಡ್ ಗೆ ಬೇಕಾಗುವಷ್ಟು ಅಕ್ಕಿ, ಗೋಧಿ ಇದೆ. ಆದರೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ನ್ಯಾಯ ಬೆಲೆ ಅಂಗಡಿ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

ಬರುವ ತಿಂಗಳ ಅಡುಗೆ ಮಾಡಲು ಅಕ್ಕಿ ಇಲ್ಲದಂತಹ ಸ್ಥಿತಿ ಬರಲಿದೆ ಎನ್ನುವ ಆತಂಕದಿಂದ ಜನ ಅಂಗಡಿ ಮುಂದೆ ಜಮಾಯಿಸುತ್ತಿದ್ದಾರೆ. ಇದರಿಂದ ಸೋಂಕು ಹಡುವಿಕೆಯಂತಹ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.