
ಬೀದರ್: ‘ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಎದುರಿನ ಸಾರ್ವಜನಿಕ ಸ್ಮಶಾನ ಭೂಮಿಯ ಚಿತಾಗಾರದ ಯಂತ್ರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆಸಲಾಗಿದ್ದು, ಪೌರಾಡಳಿತ ಸಚಿವ ರಹೀಂ ಖಾನ್ ಸಹೋದರ ಸಂಬಂಧಿ ನಾಸಿರ್ ಖಾನ್ ಹಾಗೂ ಅವರಿಗೆ ಸಾಥ್ ನೀಡಿದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ನಗರಸಭೆ ಸದಸ್ಯರೂ ಆದ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ ಆಗ್ರಹಿಸಿದರು.
2021–22ನೇ ಸಾಲಿನಲ್ಲಿ ಬೀದರ್ ಜಿಲ್ಲೆಗೆ ಎರಡು ಚಿತಾಗಾರ ಯಂತ್ರಗಳು ಮಂಜೂರಾಗಿದ್ದವು. ನಗರ ಹೊರವಲಯದ ಝರಣಿ ನರಸಿಂಹ ಸ್ವಾಮಿ ದೇವಸ್ಥಾನದ ಎದುರಿನ ರುದ್ರಭೂಮಿ ಹಾಗೂ ಬಿ.ವಿ. ಭೂಮರಡ್ಡಿ ಕಾಲೇಜು ಎದುರಿಗಿರುವ ಸ್ಮಶಾನ ಭೂಮಿಯಲ್ಲಿ ಅಳವಡಿಸಲು ಉದ್ದೇಶಿಸಲಾಗಿತ್ತು. ನರಸಿಂಹ ಸ್ವಾಮಿ ದೇವಸ್ಥಾನದ ಎದುರಿನ ರುದ್ರಭೂಮಿಯಲ್ಲಿ ಚಿತಾಗಾರದಲ್ಲಿ ಯಂತ್ರ ಅಳವಡಿಸಲಾಗಿದೆ. ಆದರೆ, ಅದು ಇಂದಿಗೂ ಕೆಲಸ ನಿರ್ವಹಿಸುತ್ತಿಲ್ಲ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ಇನ್ನೊಂದು ಯಂತ್ರ ಖರೀದಿಸದೇ 2024ರ ಫೆಬ್ರುವರಿ 22ರಂದು ಚೆಕ್ ಡ್ರಾ ಮಾಡಿ ಹಣ ಲಪಟಾಯಿಸಲಾಗಿದೆ. ಹೆಣ ಸುಡುವ ಯಂತ್ರದ ಖರೀದಿಯಲ್ಲೂ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದರು. ಆನಂತರ ಸ್ಮಶಾನಭೂಮಿಗೆ ಮಾಧ್ಯಮದವರೊಂದಿಗೆ ತೆರಳಿ ಪರಿಸ್ಥಿತಿ ವಿವರಿಸಿದರು.
ಬೀದರ್ ಮಹಾನಗರ ಪಾಲಿಕೆ ಈಗ ಭ್ರಷ್ಟಾಚಾರದ ಗೂಡಾಗಿದೆ. ಇದುವರೆಗೆ ಎರಡು ಸಾಮಾನ್ಯ ಸಭೆಗಳು ನಡೆದರೂ ಮಾಧ್ಯಮದವರನ್ನು ದೂರವಿಟ್ಟು ಸಭೆ ಮಾಡಿದ್ದಾರೆ. ಮಹಾನಗರ ಪಾಲಿಕೆಗೆ ಬೀದರ್ ಸುತ್ತಮುತ್ತಲಿನ 16 ಗ್ರಾಮಗಳನ್ನು ಸೇರಿಸಲಾಗಿದೆ. ಆದರೆ, ಆ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ನವೆಂಬರ್ 7ರಂದು ಮಹಾನಗರ ಪಾಲಿಕೆ ಅವರಣದಲ್ಲ ಎರಡು ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಭ್ರಷ್ಟಾಚಾರದಲ್ಲಿ ಶಾಮಿಲಾಗಿರುವವರ ಅಣಕು ಶವಯಾತ್ರ ನಡೆಸಲಾಗುವುದು. ಬಿವಿಬಿ ಕಾಲೇಜು ಎದುರಿನ ರಸ್ತೆಯಲ್ಲಿಯೇ ಅಣಕು ಶವಗಳನ್ನು ಸುಡಲಾಗುವುದು ಎಂದರು.
ಪಾಲಿಕೆಯ ವಾಹನಗಳ ಡೀಸೆಲ್ ಖರೀದಿಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ನಗರಸಭೆ ಸದಸ್ಯ ಪ್ರಭುಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ, ಜಿಲ್ಲಾ ಕಚೇರಿ ಕಾರ್ಯದರ್ಶಿ ಸುಭಾಷ ಮಡಿವಾಳ, ಮಂಡಲದ ಪ್ರಮುಖರಾದ ಸುನೀಲ ಗೌಳಿ, ರೋಷನ್ ವರ್ಮಾ, ಗಣೇಶ ಭೋಸ್ಲೆ, ನಿತಿನ್ ನವಲಕಿಲೆ, ನರೇಶ ಗೌಳಿ, ನವೀನ ಚಿಟ್ಟಾ, ವಿರೇಶ ಸ್ವಾಮಿ, ವಿಜಯಕುಮಾರ ಹೆಗ್ಗೆ ಇದ್ದರು.
₹2 ಕೋಟಿ ಅವ್ಯವಹಾರ
ಪಾಲಿಕೆ ಇನ್ನೊಬ್ಬ ಸದಸ್ಯ ಶಿವಕುಮಾರ ಭಾವಿಕಟ್ಟಿ ಮಾತನಾಡಿ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ.ಯಲ್ಲಿ ಸುಮಾರು ₹2 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ. ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಶಿಷ್ಯವೇತನ ಹಾಗೂ ಲ್ಯಾಪ್‌ಟಾಪ್ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಪರಿಶಿಷ್ಟರ ಓಣಿಯಲ್ಲಿ ಅಳವಡಿಸಬೇಕಿದ್ದ ವಿದ್ಯುತ್ ದೀಪಗಳನ್ನು ಬೇರೆ ಕಡೆ ಅಳವಡಿಸಿದ್ದಾರೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.