ADVERTISEMENT

ಕೆಕೆಆರ್‌ಡಿಬಿ ಕಾಮಗಾರಿಯಲ್ಲಿ ಕೋಟ್ಯಂತರ ಭ್ರಷ್ಟಾಚಾರ: ದೀಪಕ್ ಚಾಂದೋರಿ ಆರೋಪ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:31 IST
Last Updated 27 ಅಕ್ಟೋಬರ್ 2025, 5:31 IST
<div class="paragraphs"><p>ದೀಪಕ್ ಪಾಟೀಲ ಚಾಂದೋರಿ</p></div>

ದೀಪಕ್ ಪಾಟೀಲ ಚಾಂದೋರಿ

   

ಬೀದರ್: ‘ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ ಶಾಲಾ ಕಟ್ಟಡ ದುರಸ್ತಿ, ಸೋಲಾರ್ ಪ್ಯಾನೆಲ್ ಅಳವಡಿಕೆ ಹಾಗೂ ಕೊಳವೆಬಾವಿ ಕೊರೆಸುವ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ’ ಎಂದು ಮುಖಂಡ ದೀಪಕ್ ಪಾಟೀಲ ಚಾಂದೋರಿ ಗಂಭೀರ ಆರೋಪ ಮಾಡಿದ್ದಾರೆ.

ಬಹುತೇಕ ಕಡೆಗಳಲ್ಲಿ ಕಾಮಗಾರಿ ಕಳಪೆಯಾಗಿದೆ. ಅನೇಕ ಕಡೆ ಶಾಲಾ ಕಟ್ಟಡ ದುರಸ್ತಿಪಡಿಸಿಲ್ಲ . ಸೋಲಾರ್ ಪ್ಯಾನೆಲ್ ಅಳವಡಿಸಿಲ್ಲ. ಕೊಳವೆಬಾವಿ ಕೊರೆಸದೆ ಹಣ ಎತ್ತಲಾಗಿದೆ ಎಂದು ಭಾನುವಾರ ಹೊರಡಿಸಿರುವ ಪ್ರಕಟಣೆಯಲ್ಲಿ ದೂರಿದ್ದಾರೆ.

ADVERTISEMENT

ಮಂಡಳಿಯ ಮ್ಯಾಕ್ರೊ ಯೋಜನೆಯ ಅಕ್ಷರ ಅವಿಷ್ಕಾರ ಕಾರ್ಯಕ್ರಮದಡಿ (ಎಸ್‍ಸಿಎಸ್‌ಪಿ, ಟಿಎಸ್‍ಪಿ, ಸಾಮಾನ್ಯ) 2023-24ನೇ ಸಾಲಿನಲ್ಲಿ ಔರಾದ್ ಕ್ಷೇತ್ರಕ್ಕೆ ₹20 ಕೋಟಿ ಹಾಗೂ 2024-25ನೇ ಸಾಲಿನಲ್ಲಿ ₹21 ಕೋಟಿ ಸೇರಿ ಒಟ್ಟು ₹41 ಕೋಟಿ ಅನುದಾನ ಒದಗಿಸಿದ್ದು, ಒಂದು ಶಾಲೆ ದುರಸ್ತಿಗೆ ₹25 ಲಕ್ಷದಿಂದ ₹30 ಲಕ್ಷ, ಕೊಳವೆಬಾವಿ ಕೊರೆಸಲು ತಲಾ ₹5 ಲಕ್ಷ ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಶಾಸಕರು ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್.ಗೆ ವಹಿಸಿಕೊಟ್ಟಿದ್ದಾರೆ. ಜನಪ್ರತಿನಿಧಿ, ಅಧಿಕಾರಿ ಹಾಗೂ ಗುತ್ತಿಗೆದಾರರ ಒಳ ಒಪ್ಪಂದದೊಂದಿಗೆ ಕಳಪೆ ಕಾಮಗಾರಿ ಕೈಗೊಂಡು ಸರ್ಕಾರದ ಅನುದಾನ ಕೊಳ್ಳೆ ಹೊಡೆಯಲಾಗಿದೆ ಎಂದು ಆಪಾದಿಸಿದ್ದಾರೆ.

ಅನೇಕ ಶಾಲೆಗಳಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆಯಾಗಿಲ್ಲ. ಅನೇಕ ಕಡೆಗಳಲ್ಲಿ ಶಾಲೆ ಹೊರಾಂಗಣಕ್ಕಷ್ಟೇ ಬಣ್ಣ ಬಳಿದು, ಒಳಾಂಗಣ ಹಾಗೆಯೇ ಬಿಡಲಾಗಿದೆ. ಕೊರೆದ ಅನೇಕ ಕೊಳವೆಬಾವಿಗಳಲ್ಲಿ ನೀರು ಸಿಗದಿದ್ದರೂ, ನೀರು ಲಭಿಸಿದೆ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ಮೂಲಕ ಕೆಕೆಆರ್‌ಡಿಬಿಯ ಸುಮಾರು ₹200 ಕೋಟಿ ಕಾಮಗಾರಿಗಳು ನಡೆದಿದ್ದು, ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಔರಾದ್ ಕ್ಷೇತ್ರದಲ್ಲಿನ ಅವ್ಯವಹಾರ ಕುರಿತು ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಬಂಧಿಸಿದ ಇಲಾಖೆ, ಕೆಕೆಆರ್‌ಡಿಬಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದೇನೆ. ಜಿಪಂ ಸಿಇಒ ಅವರು ಸೆಪ್ಟೆಂಬರ್ 15ರಂದು ಮೂರನೇ ತಂಡದ ತನಿಖೆಗಾಗಿ ಬೀದರ್‌ನ ಕೆಇಬಿ ಕಚೇರಿ ಸಮೀಪದ ಸದಾನಂದ ಎಂಜಿನಿಯರಿಂಗ್ ಸಲ್ಯೂಷನ್ಸ್‌ನವರನ್ನು ನೇಮಕ ಮಾಡಿ ತನಿಖೆಗೆ ಆದೇಶಿಸಿದ್ದರು. ನಂತರ ಸೆಪ್ಟೆಂಬರ್ 18ರಂದು ಔರಾದ್‍ನ ಪಿಆರ್‌ಇ ಎಇಇ, ಆರ್‌ಡಬ್ಲ್ಯೂಎಸ್ ಎಇಇ ಹಾಗೂ ಬೀದರ್‌ನ ಕೆಕೆಆರ್‌ಡಿಬಿ ಸೆಲ್‍ನ ಎಇಇ ಅವರನ್ನೊಳಗೊಂಡ ತಂಡ ರಚಿಸಿದ್ದರು. ಎರಡೂ ತಂಡಗಳಿಗೆ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದರು ಎಂದು ತಿಳಿಸಿದ್ದಾರೆ.

ಒಂದು ತಿಂಗಳು ಕಳೆದರೂ ಈ ತಂಡಗಳು ತನಿಖೆ ನಡೆಸಿ, ವರದಿ ಕೊಟ್ಟಿಲ್ಲ. ಔರಾದ್ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲದಿರುವುದಕ್ಕೆ ಇದು ನಿದರ್ಶನ. ಔರಾದ್ ಕ್ಷೇತ್ರದಲ್ಲಿ ಜನಪ್ರತಿನಿಧಿ ಜೊತೆಗಿದ್ದರೆ ಸಾಕು ಯಾರು ಏನೂ ಮಾಡಲು ಆಗುವುದಿಲ್ಲ ಎಂಬಂತಹ ಮನಃಸ್ಥಿತಿ ಬೆಳೆದಿದೆ ಎಂದು ಹೇಳಿದ್ದಾರೆ.

ತನಿಖೆಗೆ ಆದೇಶಿಸಿದ ನಂತರವೂ ಯಾವುದೇ ಕಾಮಗಾರಿ ಬಿಲ್ ತಡೆ ಹಿಡಿದಿಲ್ಲ. ಎಲ್ಲವನ್ನೂ ಪಾವತಿಸಲಾಗಿದೆ. ಹೀಗಾದರೆ ತನಿಖೆ ನಡೆಸಿದ ನಂತರ ಲೋಪ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದು ಹೇಗೆ? ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗುದಿಲ್ಲವೆ. ತಮ್ಮ ದೂರಿನ ಹಿನ್ನೆಲೆಯಲ್ಲಿ ಕೆಕೆಆರ್‌ಡಿಬಿ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗೆ ಸೂಕ್ತ ಕ್ರಮಕ್ಕಾಗಿ ಪತ್ರ ಬರೆದರೂ, ಜಿಲ್ಲಾಡಳಿತ ಈ ದಿಸೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಔರಾದ್ ಕ್ಷೇತ್ರದಲ್ಲಿ ನಡೆದ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಮೇಲಧಿಕಾರಿ ಆದೇಶದ ನಂತರವೂ ತನಿಖಾ ವರದಿ ಸಲ್ಲಿಸಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯ ಹಾಗೂ ಲೋಕಾಯುಕ್ತದ ಮೊರೆ ಹೋಗಲಾಗುವುದು.
 ದೀಪಕ್ ಪಾಟೀಲ ಚಾಂದೋರಿ ಔರಾದ್‌ ಕ್ಷೇತ್ರದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.