ADVERTISEMENT

ಕಗ್ಗತ್ತಲಲ್ಲೇ ಆರೋಗ್ಯ ತಪಾಸಣೆ: ಗಡಿಯ ಚೆಕ್‌ಪೋಸ್ಟ್‌ಗಳಲ್ಲಿಲ್ಲ ಬೆಳಕಿನ ವ್ಯವಸ್ಥೆ

ರಾಜ್ಯದ ಗಡಿಯ ಚೆಕ್‌ಪೋಸ್ಟ್‌ಗಳಲ್ಲಿಲ್ಲ ಬೆಳಕಿನ ವ್ಯವಸ್ಥೆ

ಚಂದ್ರಕಾಂತ ಮಸಾನಿ
Published 27 ಮಾರ್ಚ್ 2020, 19:30 IST
Last Updated 27 ಮಾರ್ಚ್ 2020, 19:30 IST
ಬೀದರ್‌ ತಾಲ್ಲೂಕಿನ ಶಹಾಪುರ ಸಮೀಪದ ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ನಲ್ಲಿ ಕತ್ತಲಲ್ಲೇ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ
ಬೀದರ್‌ ತಾಲ್ಲೂಕಿನ ಶಹಾಪುರ ಸಮೀಪದ ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ನಲ್ಲಿ ಕತ್ತಲಲ್ಲೇ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ   

ಬೀದರ್‌: ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿ ಐದು ದಿನಗಳಾದರೂ ಬಹುತೇಕ ಚೆಕ್‌ಪೋಸ್ಟ್‌ಗಳಲ್ಲಿ ಕನಿಷ್ಠ ಅಗತ್ಯ ಸೌಲಭ್ಯಗಳೇ ಇಲ್ಲ. ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಕಗ್ಗತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಲಾಕ್‌ಡೌನ್‌ ಆದೇಶ ಹೊರಬಿದ್ದ ನಂತರ ಗಡಿಯಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕು ಸಾಗಣೆಯ ಲಾರಿಗಳನ್ನು ಹೊರತು ಪಡಿಸಿ ಎಲ್ಲ ಬಗೆಯ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ನೆರೆಯ ರಾಜ್ಯಗಳಿಗೆ ಕೂಲಿ ಕೆಲಸಕ್ಕೆ ಹೋಗಿರುವ ಕಾರ್ಮಿಕರು ರಾತ್ರಿ ವೇಳೆಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಕತ್ತಲಲ್ಲಿ ಅವರನ್ನು ಗುರುತಿಸುವುದು ಹಾಗೂ ತಪಾಸಣೆ ನಡೆಸುವುದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬಹುದೊಡ್ಡ ಸವಾಲಾಗಿದೆ.

‘ಮೊದಲ ಮೂರು ದಿನ ಬಿಸಿಲಲ್ಲೇ ನಿಂತು ಕೆಲಸ ಮಾಡಿದ್ದೇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳ ನಿಯೋಜನೆ ಮಾಡಿ ಸಿಬ್ಬಂದಿಯನ್ನು ಕಳಿಸಿದ್ದಾರೆ. ಆದರೆ, ಚೆಕ್‌ಪೋಸ್ಟ್‌ಗಳಲ್ಲಿ ಟೆಂಟ್ ಹಾಗೂ ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆ ಮಾಡಲಿಲ್ಲ. ಬಿಸಿಲಲ್ಲಿ ಆಯಾಸಗೊಂಡು ಬಳಲಿದ ನಂತರ ಪೊಲೀಸರು ಸ್ವಂತ ಖರ್ಚಿನಲ್ಲಿ ಟೆಂಟ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎಂಬುದು ಮೂಲಗಳ ವಿವರಣೆ.

ADVERTISEMENT

ಮೊದಲ ಪಾಳಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2.30, ಎರಡನೇ ಪಾಳಿ ಮಧ್ಯಾಹ್ನ 2.30ರಿಂದ ರಾತ್ರಿ 9.30 ಹಾಗೂ ಮೂರನೇ ಪಾಳಿ ರಾತ್ರಿ 9.30ರಿಂದ ಬೆಳಿಗ್ಗೆ 7.30ರ ವರೆಗೆ ಇದೆ. ಬೀದರ್ ತಾಲ್ಲೂಕಿನ ಶಹಾಪುರ ಸಮೀಪದ ಚೆಕ್‌ಪೋಸ್ಟ್‌, ಭಂಗೂರ್‌ ಚೆಕ್‌ಪೋಸ್ಟ್, ಕಮಲನಗರ ತಾಲ್ಲೂಕಿನ ದಾಬಕಾ ಹಾಗೂ ಔರಾದ್‌ ತಾಲ್ಲೂಕಿನ ಬಾರ್ಡರ್‌ ತಾಂಡಾ ಚೆಕ್‌ಪೋಸ್ಟ್‌ನಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ.

ಕತ್ತಲಾಗುತ್ತಲೇ ಪೊಲೀಸರು ಅನಿವಾರ್ಯವಾಗಿ ಕುರಚಲು ಕಾಡಿನ ಒಣ ಕಟ್ಟಿಗೆ ಸಂಗ್ರಹಿಸಿ ರಸ್ತೆ ಬದಿಯಲ್ಲಿ ಬೆಂಕಿ ಉರಿಸಿ ಬೆಳಕು ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮೊಬೈಲ್‌ ಬೆಳಕಿನಲ್ಲಿ ಪಾದಚಾರಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಬ್ಯಾಟರಿ ಮುಗಿದ ಕಾರಣ ಮೊಬೈಲ್‌ ಚಾರ್ಚ್ ಬಂದ್ ಆಗಿ ಕೆಲ ಹೊತ್ತು ಕತ್ತಲಲ್ಲಿ ಕುಳಿತುಕೊಳ್ಳಬೇಕಾಯಿತು. ಕಾನ್‌ಸ್ಟೆಬಲ್‌ ಒಬ್ಬರು ಮಾರ್ಕೆಟ್‌ ಠಾಣೆಗೆ ಕರೆ ಮಾಡಿ ಅಧಿಕಾರಿಗೆ ತಿಳಿಸಿದ ನಂತರ ಅವರು ಠಾಣೆಯಲ್ಲಿನ ಇನ್ವರ್ಟರ್‌ ತಂದು ಬೆಳಕಿನ ವ್ಯವಸ್ಥೆ ಮಾಡಿದರು.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೆಸ್ಕಾಂ ಅಧಿಕಾರಿಗಳಿಗೆ ಮನವಿಪತ್ರ ಕೊಡಲಾಗಿದೆ. ಎರಡೂ ಬಾರಿ ಜ್ಞಾಪನಾ ಪತ್ರವನ್ನೂ ಕಳಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ತಮಗೆ ಏನೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ರಾತ್ರಿ 9.30ಕ್ಕೆ ಎರಡನೇ ಪಾಳಿ ಮುಗಿದ ನಂತರ ಮಹಿಳಾ ಸಿಬ್ಬಂದಿಯನ್ನು ಕುಟುಂಬದ ಸದಸ್ಯರು ಸ್ಥಳಕ್ಕೆ ಬಂದು ಕರೆದುಕೊಂಡು ಮ‌ನೆಗೆ ಹೋಗಬೇಕಾಗಿದೆ.

‘ಆರೋಗ್ಯ ಇಲಾಖೆಯಿಂದ ಕುಡಿಯುವ ನೀರು ಹಾಗೂ ಉಪಾಹಾರದ ವ್ಯವಸ್ಥೆ ಮಾಡಿಲ್ಲ. ಬಸ್‌ ಸಂಚಾರ ಸ್ಥಗಿತಗೊಂಡ ಮೇಲೆ ಜನ ರಾತ್ರಿ ವೇಳೆಯಲ್ಲಿ ತಂಡೋಪ ತಂಡವಾಗಿ ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ಮರುಳುತ್ತಿದ್ದಾರೆ. ಕತ್ತಲಲ್ಲಿ ಹೇಗೆ ಕೆಲಸ ಮಾಡಬೇಕು ತಿಳಿಯುತ್ತಿಲ್ಲ. ಮೇಲಧಿಕಾರಿಗಳಿಗೆ ತಿಳಿಸಿದರೂ ಅವರು ಸ್ಪಂದಿಸುತ್ತಿಲ್ಲ’ ಎಂದು ಕೆಲ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

‘ನಾಲ್ಕು ದಿನ ಹೀನಾಯ ಸ್ಥಿತಿ ಅನುಭವಿಸಿದ್ದೇವೆ. ಇದೀಗ ಉಪಾಹಾರ ಕಟ್ಟಿಕೊಂಡು ಬರುತ್ತಿದ್ದೇವೆ. ಜಿಲ್ಲಾ ಆಡಳಿತ ವಿದ್ಯುತ್‌ ದೀಪ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನಾದರೂ ಮಾಡಬೇಕು ಎನ್ನುವುದು ನಮ್ಮ ಕಳಕಳಿಯ ಮನವಿಯಾಗಿದೆ‌’ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.