ADVERTISEMENT

ಬೀದರ್ | ಅರ್ಧ ಶತಕ ದಾಟಿದ ಸಾವಿನ ಸಂಖ್ಯೆ

ಇನ್ನೂ ಬರಬೇಕಿದೆ 3,304 ಜನರ ವೈದ್ಯಕೀಯ ವರದಿ, ನ್ಯಾಯಾಧೀಶರೊಬ್ಬರಿಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 5:54 IST
Last Updated 11 ಜುಲೈ 2020, 5:54 IST
   

ಬೀದರ್: ಜಿಲ್ಲೆಯಲ್ಲಿ ಶುಕ್ರವಾರ 19 ಜನರಿಗೆ ಕೋವಿಡ್‌-19 ತಗುಲಿದೆ. ಕೋವಿಡ್ ಪೀಡಿತರ ಸಂಖ್ಯೆ 913ಕ್ಕೆ ಏರಿದೆ. ಮೃತ ಮೂವರು ವ್ಯಕ್ತಿಗಳಿಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದ್ದು, ಮೃತರ ಸಂಖ್ಯೆ 52ಕ್ಕೆ ತಲುಪಿದೆ.

ಬೀದರ್‌ ತಾಲ್ಲೂಕಿನ 61 ವರ್ಷದ ಪುರುಷ ಜುಲೈ 2 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಜುಲೈ 6 ರಂದು ಕೊನೆಯುಸಿರೆಳೆದಿದ್ದರು. 75 ವರ್ಷದ ಇನ್ನೊಬ್ಬರು ಜುಲೈ 1 ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ 8 ರಂದು ಮೃತಪಟ್ಟಿದ್ದರು. 72 ವರ್ಷದ ಮತ್ತೊಬ್ಬರು ಪುರುಷ ಜುಲೈ 5 ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ 7 ರಂದು ಮೃತಪಟ್ಟಿದ್ದರು. ಈ ಮೂವರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಶುಕ್ರವಾರ ವರದಿ ಪಾಸಿಟಿವ್‌
ಬಂದಿದೆ.

ಬೀದರ್‌ನ ನ್ಯಾಯಾಧೀಶರೊಬ್ಬರಿಗೆ ಕೋವಿಡ್‌-19 ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಎರಡು ನ್ಯಾಯಾಲಯಗಳ ಕಟ್ಟಡದಲ್ಲಿನ ಕಾರ್ಯ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬೇರೊಂದು ನ್ಯಾಯಾಲಯದ ನ್ಯಾಯಾಧೀಶರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಹುಮನಾಬಾದ್‌ನ ಐವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ಸೋಂಕು ತಗುಲಿದೆ.

ADVERTISEMENT

ಬೀದರ್‌ ತಾಲ್ಲೂಕಿನ ಏಳು ಜನರಿಗೆ, ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್‌ ತಾಲ್ಲೂಕಿನ ತಲಾ ನಾಲ್ವರಿಗೆ ಕೋವಿಡ್‌- 19 ತಗುಲಿರುವುದು ದೃಢಪಟ್ಟಿದೆ. ಸೋಂಕಿತರಲ್ಲಿ ಒಂದು ವರ್ಷದ ಹೆಣ್ಣು ಮಗು, ಎಂಟು ಮಹಿಳೆಯರು ಹಾಗೂ 11 ಪುರುಷರು ಇದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 42,044 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 37,827 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಹಾಗೂ ‌‌913 ಪಾಸಿಟಿವ್‌ ಬಂದಿವೆ.ಇಂದು ಆಸ್ಪತ್ರೆಯಿಂದ ಒಬ್ಬರೂ ಬಿಡುಗಡೆಯಾಗಿಲ್ಲ.

ಸೋಂಕು ಇದ್ದರೂ ಜನ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಸೋಂಕಿತರ ಬಗ್ಗೆ ಜಿಲ್ಲಾಡಳಿತವೂ ಸರಿಯಾಗಿ ಮಾಹಿತಿ ಒದಗಿಸುತ್ತಿಲ್ಲ. ಯಾವ ಪ್ರದೇಶದಲ್ಲಿ ಸೋಂಕಿತರು ಇದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗದ ಕಾರಣ ಜನ ಗೊತ್ತಿಲ್ಲದಂತೆ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಸೋಮವಾರ ಸಚಿವರಿಂದ ಸಭೆ

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಜನರಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳೂ ಬೊಟ್ಟು ಮಾಡ ತೊಡಗಿದ್ದಾರೆ. ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಜುಲೈ 13 ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಿದ್ದಾರೆ.

‘ಆರೋಗ್ಯ ಇಲಾಖೆಯ ಅಧಿಕಾರಿಗಳ ಬಗ್ಗೆ ಅನೇಕ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಸೋಮವಾರ ಕೋವಿಡ್‌ 19 ನಿಯಂತ್ರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡ ಬಗ್ಗೆ ಸಚಿವರು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಲಾಕ್‍ಡೌನ್: ನಿಯಮ ಉಲ್ಲಂಘಿಸಿದರೆ ಕ್ರಮ- ಎಚ್ಚರಿಕೆ

ಕೋವಿಡ್ 19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಆಗಸ್ಟ್ 2ರ ವರೆಗೆ ಎಲ್ಲ ಭಾನುವಾರ ಪೂರ್ಣ ದಿನದ ಲಾಕ್‍ಡೌನ್ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಪ್ರಯುಕ್ತ ಜುಲೈ 12ರ ಭಾನುವಾರ ಪೂರ್ಣ ದಿನ ಲಾಕ್‍ಡೌನ್ ಇರಲಿದೆ. ಜುಲೈ 11ರ ರಾತ್ರಿ 8 ಗಂಟೆಯಿಂದ ಜುಲೈ 13ರ ಬೆಳಗಿನ ಜಾವ 5 ಗಂಟೆವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರಲಿದೆ.

ಈ ವೇಳೆ ಅತ್ಯವಶ್ಯಕ ಸೇವೆಗಳು ಮಾತ್ರ ಲಭ್ಯ ಇರುತ್ತವೆ. ಲಾಕ್‍ಡೌನ್ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮ ಉಲ್ಲಂಘಿದ್ದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ ಎಚ್ಚರಿಸಿದ್ದಾರೆ.

ಕೋವಿಡ್ 19 ನಿರ್ವಹಣೆಗೆ: 14 ತಂಡಗಳ ರಚನೆ

ಬೀದರ್ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ನಿರ್ದಿಷ್ಟ ಜವಾಬ್ದಾರಿಗಳೊಂದಿಗೆ ಜಿಲ್ಲಾಮಟ್ಟದಲ್ಲಿ 14 ತಂಡಗಳನ್ನು ರಚಿಸಿದ್ದಾರೆ.

ತಂಡಗಳು ಸಂಘಟಿತ ಹಾಗೂ ಸಮನ್ವಯ ರೀತಿಯಲ್ಲಿ ತಮಗೆ ವಹಿಸಿದ ಕಾರ್ಯವನ್ನು ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.