ADVERTISEMENT

ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್

ನೆರೆಯ ಮಹಾರಾಷ್ಟ್ರದಲ್ಲಿ ಮಕ್ಕಳಿಗೂ ಕೋವಿಡ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 2:27 IST
Last Updated 2 ಜೂನ್ 2021, 2:27 IST

ಬೀದರ್‌: ನೆರೆಯ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಮಕ್ಕಳಲ್ಲೂ ಕೋವಿಡ್ ಕಾಣಿಸಿಕೊಂಡಿರುವ ವರದಿಯಾದ ಕಾರಣ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಸಂವಾದ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿಯ ತುರ್ತು ಸಭೆಯಲ್ಲಿ ಬ್ರಿಮ್ಸ್ ಆಸ್ಪತ್ರೆಯ ಮಕ್ಕಳರೋಗ ತಜ್ಞರ ವಿಭಾಗದ ಮತ್ತು ಸ್ತ್ರೀರೋಗ ತಜ್ಞರ ವಿಭಾಗದ ಮುಖ್ಯಸ್ಥರು ಮತ್ತು ಮಕ್ಕಳರೋಗ ಹಾಗೂ ತಜ್ಞ ವೈದ್ಯರು ಸಲಹೆಗಳನ್ನು ನೀಡಿದರು.

ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಕೋವಿಡ್ ಶಂಕಿತ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಮಹಾರಾಷ್ಟ್ರದೊಂದಿಗೆ ಬೀದರ್ ಜಿಲ್ಲೆಯ ಗಡಿ ಹಂಚಿಕೊಂಡಿರುವ ಕಾರಣಕ್ಕೆ ಮುಂಜಾಗ್ರತೆ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ADVERTISEMENT

ಮಕ್ಕಳಲ್ಲೂ ಕೊರೊನಾ ಸೋಂಕು ಹರಡುವುದು ಕಂಡುಬಂದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೂತನ ಬೋಧಕ ಆಸ್ಪತ್ರೆಯಲ್ಲಿ ಮತ್ತು 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಲಾ 50 ಬೆಡ್‌ಗಳನ್ನು ಮೀಸಲಿಡಬೇಕು. ಐಸಿಯು, ವೆಂಟಿಲೇಟರ್ ಜತೆಗೆ ಬೆಡ್‌ಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

1 ತಿಂಗಳಿನಿಂದ 10 ವರ್ಷದ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಲ್ಲಿ ಆಯಾ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆಂದು ಮೀಸಲಿಡುವ ತಲಾ 50 ಬೆಡ್‌ಗಳಲ್ಲಿ 20 ಐಸಿಯು ಬೆಡ್‌ಗಳು ಇರಬೇಕು. 10 ನವಜಾತ ಶಿಶುಗಳ ಆರೈಕೆಗೆ ಕಾಯ್ದಿರಿಸಬೇಕು. 20 ಆಕ್ಸಿಜನ್ ಬೆಡ್‌ಗಳೆಂದು ವಿಭಾಗೀಕರಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

10 ವರ್ಷ ಮೇಲ್ಪಟ್ಟ ವಯೋಮಾನದ ಮಕ್ಕಳಲ್ಲಿ ಕಡಿಮೆ ತಿವ್ರತರವಾದ ಕಾಯಿಲೆಗೆ ಚಿಕಿತ್ಸೆ ನೀಡಲು 100 ಹಾಸಿಗೆಯ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಮತ್ತೆ 50 ಬೆಡ್‌ಗಳನ್ನು ಕಾಯ್ದಿರಿಸಬೇಕು ಎಂದು ಸೂಚನೆ ನೀಡಿದರು.

ಮಕ್ಕಳಿಗೆ ಕೊರೊನಾ ಸೋಂಕು ತೀವ್ರ ರೀತಿಯಲ್ಲಿ ಹರಡುವುದು ಕಂಡುಬಂದಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ
ನೀಡಿ, ಅದನ್ನು ಸಮರ್ಪಕ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ತಜ್ಞ ವೈದ್ಯರಿಗೆ ತರಬೇತಿಗೆ ವ್ಯವಸ್ಥೆ ಮಾಡಬೇಕು. ಮಕ್ಕಳ ತಜ್ಞ ವೈದ್ಯರು ಕೂಡ ಅಗತ್ಯ ಸಂಖ್ಯೆಯಲ್ಲಿ ಇರಬೇಕು ಎಂದು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಬ್ರಿಮ್ಸ್ ಹಾಗೂ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರು ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಭುವನೇಶ ಪಾಟೀಲ, ಡಿಎಸ್‌ಒ ಡಾ.ಕೃಷ್ನಾ ರೆಡ್ಡಿ, ಆರ್‌ಸಿಎಚ್ ಅಧಿಕಾರಿ ಡಾ.ರಾಜಶೇಖರ, ಮಕ್ಕಳ ರೋಗ ತಜ್ಞರ ವಿಭಾಗದ ಡಾ.ಶಾಂತಲಾ ಕೌಜಲಗಿ, ಸ್ತ್ರೀರೋಗ ತಜ್ಞರ ವಿಭಾಗದ ಮುಖ್ಯಸ್ಥೆ ಉಮಾ ದೇಶಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.