
ಹುಲಸೂರ: ಎಲ್ಲ ಕಾಲದಲ್ಲೂ ನಡೆಯುವ ಅತ್ಯಾಚಾರ, ಭ್ರಷ್ಟಾಚಾರ, ಕ್ರೌರ್ಯ ಮೊದಲಾದ ಕೇಡನ್ನು ದಾಟಲು ಸೃಜನಶೀಲತೆ ಅಗತ್ಯ ಎಂದು ಕಲಬುರಗಿಯ ರಂಗಕರ್ಮಿ ಉಮೇಶ ಪಾಟೀಲ ಹೇಳಿದರು.
ತಾಲ್ಲೂಕಿನ ಗಡಿಗೌಡಗಾಂವನ ಧೂಳಪ್ಪ ಭರಮಶೆಟ್ಟೆ ಅವರ ತೋಟದಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಬಸವಕಲ್ಯಾಣದ ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ರಂಗಭೂಮಿ, ಸಮಾಜ ಮತ್ತು ರಾಜಕಾರಣ’ ಕುರಿತ ಪ್ರತಿಷ್ಠಾನದ 95ನೇ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಭೂಮಿಗೆ ಪ್ರತಿರೋಧ ಗುಣವಿದೆ ಎಂದರು.
ಸಮಾಜದ ಸಂಕೀರ್ಣತೆಗಳು, ಸಮಕಾಲೀನ ಸಂದಿಗ್ಧತೆಗಳು, ಮನುಷ್ಯನ ಆತಂಕಗಳನ್ನು ರಂಗಭೂಮಿ ತನ್ನ ಪ್ರದರ್ಶನದ ಸ್ವರೂಪದಲ್ಲಿ ಅನಾವರಣ ಮಾಡುತ್ತ ಬಂದಿದೆ. ಎಲ್ಲ ಕಾಲಕ್ಕೂ ಕಾಡಿದ ಕಾಮ, ಸಂಪತ್ತು ಮತ್ತು ಅಧಿಕಾರದ ದಾಹ, ಅಧಿಕಾರದ ಬೆನ್ನಟ್ಟಿ ನಡೆಸಿದ ಹಿಂಸೆ, ಕ್ರೌರ್ಯ, ಮಹಿಳೆಯರ ಮತ್ತು ದುರ್ಬಲರ ಅಸಹಾಯಕತೆ ಇಂಥ ಹಲವು ಸಂಗತಿಗಳ ಬಗೆಗೆ ರಂಗಭೂಮಿ ನಿರಂತರ ಮಾತನಾಡುತ್ತ ಬಂದಿದೆ ಎಂದರು.
ಸಾಹಿತ್ಯ ಕೃತಿಗಳನ್ನು ಓದುಗರಿಗೆ ನೀಡುವ ಮೂಲಕ ಸಮಾರಂಭ ಉದ್ಘಾಟಿಸಿದ ಹುಲಸೂರ ತಹಶೀಲ್ದಾರ್ ಶಿವಾನಂದ ಮೇತ್ರೆ, ಬಹುತ್ವ ಹಾಗೂ ಬಹುಸಂಸ್ಕೃತಿಯ ನಮ್ಮ ದೇಶದಲ್ಲಿ ನಾಡಿಮಿಡಿತಗಳು ಸಾಮಾಜಿಕ ಸೌಹಾರ್ದತೆ ಹಾಗೂ ಧಾರ್ಮಿಕ ಸಹಿಷ್ಣುತೆ ಇಡೀ ಲೋಕದ ಚಾಲಕ ಶಕ್ತಿಗಳಾವೆ. ಮಾನವೀಯತೆ ಜಗತ್ತಿನ ದೊಡ್ಡ ತತ್ವವಾಗಿದೆ ಮತ್ತು ಸತ್ವವೂ ಆಗಿದೆ ಎಂದರು.
ಪತ್ರಕರ್ತ ಮಾಣಿಕ ಭುರೆ, ಬಸವಕಲ್ಯಾಣದ ಐಡಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಷಿ, ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಬಸವಕಲ್ಯಾಣ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಭೀಮಾಶಂಕರ ಬಿರಾದಾರ ಮಾತನಾಡಿದರು.
ಮುಖಂಡ ವಿಜಯಕುಮಾರ ಪಾಟೀಲ ಶಿವಪುರ, ಪತ್ರಕರ್ತರಾದ ಬಸವಕುಮಾರ ಕವಟೆ, ನಾಗಪ್ಪ ನಿಣ್ಣೆ, ಶಿಕ್ಷಕ ಎಂಡಿ. ಅಲ್ತಾಫ್, ಧೂಳಪ್ಪ ಭರಮಶೆಟ್ಟೆ, ದತ್ತಾತ್ರಿ ರಾಘೋ, ಕಂಟೆಪ್ಪ ಮೇತ್ರೆ, ಸತೀಶ್ ಹಿರೇಮಠ, ಬಸವರಾಜ ಬಿರಾದಾರ ಖಂಡಾಳ, ಪ್ರಭಾಕರ ನೌಗಿರೆ, ಡಾ. ಪ್ರವೀಣ ದಸ್ತಾಪುರೆ, ಅಂಬರೀಶ್ ಮಹಾಲಿಂಗ, ಕಾಶಿನಾಥ ಬಿರಾದಾರ, ಜಗನ್ನಾಥ ಭೋಪಳೆ, ಸಿದ್ರಾಮ ಕಾವಳೆ, ನಾಗಪ್ಪ ನಿಣ್ಣೆ, ದಯಾನಂದ ಭರಮಶೆಟ್ಟೆ, ಸಿದ್ದರಾಮ ಖ್ಯಾಡೆ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ರಂಗಕರ್ಮಿ ಉಮೇಶ ಪಾಟೀಲ ಅವರು ತಾವು ಬರೆದ ಟ್ಯಾಬ್ಲೆಟ್’ ನಾಟಕದ ವಾಚಿಸಿ, ಏಕಪಾತ್ರಾಭಿನಯಲ್ಲಿ ಅಭಿನಯಿಸಿದ್ದು ಗಮನ ಸೆಳೆಯಿತು.
ಪ್ರತಿಷ್ಠಾನದ ನಿರ್ದೇಶಕ ಡಾ. ಶಿವಾಜಿ ಮೇತ್ರೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.