
ಔರಾದ್: ‘ಭಾರಿ ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಹಾನಿಯಾಗಿದ್ದು ಔರಾದ್ ಕ್ಷೇತ್ರದಲ್ಲಿ. ಆದರೆ ಪರಿಹಾರ ವಿತರಣೆಯಲ್ಲಿ ಅತಿ ಕಡಿಮೆಯಾಗಿದೆ’ ಎಂದು ಶಾಸಕ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಳೆ ಹಾನಿ ಪರಿಹಾರ ಸಾಕಷ್ಟು ರೈತರಿಗೆ ಸಿಕ್ಕಿಲ್ಲ. ಕೆಲ ರೈತರಿಗೆ ಒಂದು ಕಂತು, ಮತ್ತೆ ಕೆಲ ರೈತರಿಗೆ ಎರಡನೇ ಕಂತಿನ ಹಣ ಬಂದಿದೆ. ಇನ್ನು ಹಲವು ರೈತರಿಗೆ ಒಂದೂ ಕಂತು ಬಂದಿಲ್ಲ. ಈ ಬಗ್ಗೆ ಕೇಳಲು ಹೋದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ’ ಎಂದರು.
‘ನಮ್ಮಲ್ಲಿ ಶೇ 60ರಷ್ಟು ರೈತರು ಅನಕ್ಷರಸ್ಥರಿದ್ದಾರೆ. ಹೀಗಾಗಿ ಸರಿಯಾದ ಮಾರ್ಗದರ್ಶನ ಮಾಡಿ ಬೆಳೆ ಹಾನಿ ಪರಿಹಾರ ಸಿಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಆದರೆ ಹಣ ಕೊಟ್ಟವರ ಹೊಲ ಸರ್ವೆ ಮಾಡಿದ್ದಾರೆ. ಅಂತಹವರಿಗೆ ಮಾತ್ರ ಪರಿಹಾರ ಹಣ ಬರುತ್ತಿದೆ. ಉಳಿದವರಿಗೆ ಬರುತ್ತಿಲ್ಲ. ಇದಕ್ಕೆ ನೀವೇ ಜವಾಬ್ದಾರರು. ಆಗಿರುವ ಲೋಪ ಸರಿಪಡಿಸಬೇಕು’ ಎಂದು ತಹಶೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಮಹೇಶ ಪಾಟೀಲ, ಅಮಿತ ಕುಲಕರ್ಣಿ, ತಾಪಂ. ಇಒ ಕಿರಣ ಪಾಟೀಲ, ಹಣಮಂತರಾವ ಕೌಟಗೆ ಹಾಗೂ ವಿವಿಧ ಇಲಾಖೆ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.