ಹುಲಸೂರ: ಈ ಭಾಗದಲ್ಲಿ ಆಗಸ್ಟ್‌ನಿಂದ ಇಲ್ಲಿಯವರೆಗೂ ಸುರಿದ ನಿರಂತರ ಮಳೆಯಿಂದಾಗಿ ಮಹಾರಾಷ್ಟ್ರದ ಧನೆಗಾಂವ ಹಾಗೂ ಉಜನಿ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಮಾಂಜ್ರಾ ನದಿಗೆ ಹರಿಸಿದ್ದರಿಂದ ನದಿ ದಡದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ.
ಸಕಾಲದಲ್ಲಿ ಮುಂಗಾರು ಮಳೆಯಾಗಿದ್ದರಿಂದ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಆದರೆ ಅತಿವೃಷ್ಟಿ ಅವರ ನಿರೀಕ್ಷೆಗೆ ತಣ್ಣೀರೆರಚಿದೆ. ನಿರಂತರ ಮಳೆಯ ಪರಿಣಾಮದಿಂದ ಮೆಣಸಿನಕಾಯಿ, ತೊಗರಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ.
‘ನೀರಿನ ರಭಸ ಹೆಚ್ಚಾದ ಪರಿಣಾಮ ನದಿ ದಡದಲ್ಲಿರುವ ಹೊಲಗಳಿಗೆ ನೀರು ನುಗ್ಗಿದ್ದರಿಂದ ಮಣ್ಣಿನೊಂದಿಗೆ ಬೆಳೆ ಕೊಚ್ಚಿಕೊಂಡು ಹೋಗಿವೆ. ಒಂದು ಎಕರೆ ಮೆಣಸಿನಕಾಯಿ, ಎರಡು ಎಕರೆ ಕಬ್ಬು, ಮೂರು ಎಕರೆ ಕಬ್ಬು, ಮಾವು, ಕರಿಬೇವು, ತರಕಾರಿ ಎಲ್ಲವೂ ನೀರು ಪಾಲಾಗಿವೆ. ಕನಿಷ್ಠ ₹4 ಲಕ್ಷ ರೂಪಾಯಿ ನಷ್ಟವಾಗಿದೆ’ ಎಂದು ನೋವು ತೋಡಿಕೊಂಡರು ರೈತ ಬಸಪ್ಪ ಚೌರೆ.
ಹುಲಸೂರ ಹಾಗೂ ಭಾಲ್ಕಿ ತಾಲ್ಲೂಕು ಅತಿವೃಷ್ಟಿ ಪ್ರಭಾವಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು. ಶೀಘ್ರ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರಾದ ಸುನೀಲ ಭಜಂಗೆ ಹಾಗೂ ಕೈಲಾಸ ಪಾರಶೆಟ್ಟಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.