ಬಸವಕಲ್ಯಾಣ: ‘ಕೃಷಿ ಹಾಗೂ ಇತರೆ ಇಲಾಖೆಗಳಿಂದ ಕೈಗೊಂಡಿರುವ ಅತಿವೃಷ್ಟಿಯಿಂದಾದ ಬೆಳೆ ಹಾನಿ ಸಮೀಕ್ಷೆಯಿಂದ ಯಾವುದೇ ರೈತರಿಗೆ ಅನ್ಯಾಯ ಆಗಕೂಡದು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಆಗ್ರಹಿಸಿದರು.
ತಾಲ್ಲೂಕಿನ ಕೊಹಿನೂರ ಮತ್ತು ಮಂಠಾಳ ಹೋಬಳಿ ಗ್ರಾಮಗಳ ವ್ಯಾಪ್ತಿಯ ಜಮೀನಿನಲ್ಲಿ ಸಮೀಕ್ಷೆ ಕೈಗೊಳ್ಳುತ್ತಿದ್ದ ಅಧಿಕಾರಿಗಳಿಗೆ ಅವರು ಸಲಹೆ ನೀಡಿದರು.
‘ಸತತ ಮಳೆಯಿಂದ ತಾಲ್ಲೂಕಿನ ಗಡಿ ಭಾಗದ ಎಲ್ಲ ಗ್ರಾಮಗಳ ರೈತರೂ ನಷ್ಟ ಅನುಭವಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆದಿರುವ ಸೋಯಾಬಿನ ಇಳುವರಿ ಕೂಡ ಬರದಂತಾಗಿ ಕೃಷಿಕ ಚಿಂತಾಕ್ರಾಂತನಾಗಿರುವುದು ಅಧಿಕಾರಿಗಳ ಗಮನದಲ್ಲಿರಲಿ. ಎಲ್ಲೆಡೆ ರಸ್ತೆಯೂ ಹಾಳಾಗಿದೆ’ ಎಂದರು.
‘ಅಲ್ಪ ಜಮೀನು ಹೊಂದಿರುವ ರೈತರನ್ನೂ ಬಿಡದೆ ಸಮೀಕ್ಷೆ ನಡೆಸಬೇಕು. ಅನೇಕ ಕಡೆ ಪಕ್ಕದ ನದಿ, ನಾಲೆಗಳ ನೀರು ನುಗ್ಗಿ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಅವರಿಗೂ ಪರಿಹಾರ ದೊರಕಿಸಿ ಕೊಡಬೇಕು. ಯೋಗ್ಯ ಪರಿಹಾರ ಸಿಗುವಂತಾಗಲು ಸರ್ಕಾರದ ಮಟ್ಟದಲ್ಲಿ ನಾನು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
ಸ್ಥಳದಲ್ಲಿದ್ದ ಕೃಷಿ ಸಹಾಯಕ ನಿರ್ದೇಶಕ ಗೌತಮ ಮಾತನಾಡಿ, ‘ಅನೇಕ ಕಡೆ ಜಮೀನುಗಳಲ್ಲಿ ಬರೀ ನೀರು ಇರುವುದು ಕಂಡು ಬರುತ್ತಿದೆ. ಬೆಳೆಗಳಿಗೆ ಹಾನಿಯಾಗಿದೆ. ಸಮೀಕ್ಷೆಯಲ್ಲಿ ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಲಾಗುವುದು’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಫಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ, ನಗರಸಭೆ ಸದಸ್ಯ ರವೀಂದ್ರ ಬೋರೋಳೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ, ಪ್ರಮುಖರಾದ ಮಹೇಶ ಪಾಟೀಲ, ಶಿವು ಕಲ್ಲೋಜಿ, ಮೇಘನಾಥ ಕಾರಬಾರಿ, ಜೈದೀಪ ತೆಲಂಗ್ ಮತ್ತಿತರರು ಉಪಸ್ಥಿತರಿದ್ದರು.
ಬೆಳೆ ನಷ್ಟಕ್ಕೆ ಪರಿಹಾರ ಹಣ ಮತ್ತು ಬೆಳೆ ವಿಮೆಯ ಹಣ ಪ್ರತ್ಯೇಕವಾಗಿ ಸಿಗಲಿದ್ದು ಅದಕ್ಕಾಗಿ ಕೃಷಿ ಇಲಾಖೆಯಿಂದ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುತ್ತೇವೆಗೌತಮ್, ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.