ADVERTISEMENT

ಹುಲಸೂರ | ಉತ್ತಮ ಮಳೆ: ಬೆಳೆಗಳಿಗೆ ಜೀವಕಳೆ

ನಳನಳಿಸುತ್ತಿರುವ ಬೆಳೆಗಳು, ರೈತರ ಮೊಗದಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 5:46 IST
Last Updated 24 ಜುಲೈ 2024, 5:46 IST
ಹುಲಸೂರ ಸಮೀಪದ ಹೆಸರು ಬಿತ್ತನೆ ಮಾಡಲಾದ ಜಮೀನೊಂದರಲ್ಲಿ ಮಹಿಳೆಯರು ಕಳೆ ತೆಗೆಯುತ್ತಿದ್ದಾರೆ
ಹುಲಸೂರ ಸಮೀಪದ ಹೆಸರು ಬಿತ್ತನೆ ಮಾಡಲಾದ ಜಮೀನೊಂದರಲ್ಲಿ ಮಹಿಳೆಯರು ಕಳೆ ತೆಗೆಯುತ್ತಿದ್ದಾರೆ   

ಹುಲಸೂರ: ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಸುರಿಯುತ್ತಿದ್ದು, ಬೆಳೆಗಳಿಗೆ ಜೀವಕಳೆ ಬಂದಿದೆ. ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ತಾಲ್ಲೂಕಿನಲ್ಲಿ ಶೇ 95ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಉದ್ದು, ಹೆಸರು, ತೊಗರಿ, ಸೋಯಾ, ಹತ್ತಿ, ಹೈಬ್ರಿಡ್ ಜೋಳವನ್ನು ಅನ್ನದಾತರು ಬಿತ್ತಿದ್ದಾರೆ. ಮಳೆಯಿಂದ ಬೆಳೆ ನಳನಳಿಸುತ್ತಿದ್ದು, ಇದೀಗ ಕಳೆ ಕೀಳುವುದು, ಎಡೆ ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಕೆಲ ರೈತರು ಬೆಳೆಗಳಲ್ಲಿ ಕಳೆನಾಶಕ್ಕೆ ಔಷಧ ಸಿಂಪಡಿಸುತ್ತಿದ್ದಾರೆ.

ಸೈಕಲ್ ಎಡೆಕುಂಟೆ ಬಳಕೆ:

ADVERTISEMENT

ಗ್ರಾಮೀಣ ಪ್ರದೇಶದ ಬಹುತೇಕ ಕೃಷಿ ಜಮೀನುಗಳಲ್ಲಿ ಕಳೆ ನಾಶಕ್ಕೆ ಸೈಕಲ್‌ ಎಡೆಕುಂಟೆ ಹೊಡೆಯುತ್ತಿದ್ದಾರೆ. ‘ಸೈಕಲ್‌ ಚಕ್ರ ಬಳಸಿ ತಯಾರಿಸಿದ ಎಡೆಕುಂಟೆಯಿಂದ ದಿನಕ್ಕೆ ಒಂದು ಎಕರೆ ಭೂಮಿ ಎಡೆ ಹೊಡೆಯಬಹುದಾಗಿದೆ. ಎತ್ತುಗಳ ಮೂಲಕ ಎಡೆ ಹೊಡೆಯುವುದಕ್ಕಿಂತ ವೆಚ್ಚವೂ ಕಡಿಮೆಯಾಗಿದೆ’ ಎನ್ನುತ್ತಾರೆ ರೈತ ಗಣೇಶ್ ಡಾವರಗಾವೆ.

ಡ್ರೋನ್ ಬಳಸಿ ಔಷಧ ಸಿಂಪಡಣೆ:

ಕೆಲ ರೈತರು ಡ್ರೋನ್ ಮೂಲಕ ಬೆಳೆಗಳಿಗೆ ಔಷಧ ಸಿಂಪಡಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ನುರಿತ ಕಾರ್ಮಿಕರನ್ನು ಬೇಡುವ ಕೃಷಿ ಕೆಲಸಗಳನ್ನು ಡ್ರೋನ್ ಸುಲಭವಾಗಿ ಮಾಡುತ್ತದೆ. ಕಾರ್ಮಿಕರಿಗಾಗಿ ಕಾದು–ಕಾದು ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡಬೇಕಿತ್ತು. ಆದರೆ, ಡ್ರೋನ್ ಮೂಲಕ ಈ ಸಮಸ್ಯೆ ನೀಗಿದಂತಾಗಿದೆ.

ಬೆಳೆ ಸಮೀಕ್ಷೆ ಸುಲಭಗೊಳಿಸಲು ಸರ್ಕಾರ ಜಾರಿಗೊಳಿಸಿದ ಬೆಳೆ ದರ್ಶಕ್ ಆ್ಯಪ್ ಬಳಕೆಗೆ ರೈತರು ಆಸಕ್ತಿ ತೋರದ ಕಾರಣ ಕೃಷಿ ಇಲಾಖೆ ನೇಮಿಸುವ ಖಾಸಗಿ ವ್ಯಕ್ತಿಗಳೇ ಜಮೀನು ಸುತ್ತಿ ಬೆಳೆ ಸಮೀಕ್ಷೆ ಕೈಗೊಳ್ಳುವಂತಾಗಿದೆ. ಇದರಿಂದ ಸಮೀಕ್ಷೆ ಪೂರ್ಣಗೊಳ್ಳಲು ಸಮಯಾವಕಾಶ ಹಿಡಿಯುವಂತಾಗಿದೆ. ರಾಜ್ಯ ಸರ್ಕಾರವು ಬೆಳೆ ಸಮೀಕ್ಷೆಯನ್ನು ಸ್ವತಃ ರೈತರು ಮಾಡಲಿ ಎಂಬ ಉದ್ದೇಶದಿಂದ ಮೊಬೈಲ್‌ ಆ್ಯಪ್‌ ಪರಿಚಯಿಸಿದೆ. ಆದರೆ ಜಿಲ್ಲೆಯ ಬಹುತೇಕ ರೈತರು ಈ ಆ್ಯಪ್ ಬಳಕೆ ಮಾಡಲು ಈಗಲೂ ಹಿಂಜರಿಯುತ್ತಿದ್ದಾರೆ. ‘ನಮಗೆ ಆ್ಯಪ್ ಬಳಕೆ ಗೊತ್ತಾಗುತ್ತಿಲ್ಲ. ಗೊತ್ತಾದರೂ ನೆಟ್‌ವರ್ಕ್ ಸಮಸ್ಯೆಯಿಂದ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ. ಇದು ಕೃಷಿ, ಕಂದಾಯ ಇಲಾಖೆಗಳಿಗೆ ತಲೆನೋವಾಗಿ ಪರಿಣಮಿಸಿದೆ.

ನೆಟ್‌ವರ್ಕ್ ಸಮಸ್ಯೆ:

‘ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದೆ. ಎಲ್ಲ ರೈತರ ಬಳಿ ಆ್ಯಂಡ್ರಾಯ್ಡ್ ಮೊಬೈಲ್‌ಗಳಿಲ್ಲ. ಕೆಲವು ರೈತರಿಗೆ ತಾಂತ್ರಿಕ ಜ್ಞಾನದ ಕೊರತೆ ಇದೆ. ಕೃಷಿ ಇಲಾಖೆಯು ರೈತರಿಗೆ ತರಬೇತಿಯನ್ನೇ ನೀಡಿಲ್ಲ. ಹೀಗಾಗಿ ಬೆಳೆ ಸಮೀಕ್ಷೆ ಕಾರ್ಯ ಕುಂಠಿತಗೊಂಡಿದೆ’ ಎಂದು ರೈತ ಮುಖಂಡ ದೇವೇಂದ್ರ ಹಲಿಂಗೆ ದೂರಿದರು.

ಬೆಳೆ ವಿಮೆ ನೋಂದಣಿಗೆ ಗಡುವು:

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಮುಂಗಾರು ಹಂಗಾಮಿಗೆ ಜಿಲ್ಲೆಯ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ಸೋಯಾ ಅವರೆ, ತೊಗರಿ ಬೆಳೆಗೆ ವಿಮೆ ಮಾಡಲು ಅವಕಾಶವಿದೆ. ಈ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬೆಳೆ ಕೈಕೊಟ್ಟರೆ ವಿಮೆ ರಕ್ಷಣೆ ಒದಗಿಸುತ್ತದೆ.

ರೈತರು ಗ್ರಾಹಕ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಿದರೆ, ಕಂತು ಜತೆಗೆ ಸೇವಾಶುಲ್ಕ ₹100 ಪಾವತಿಸಬೇಕಾಗುತ್ತದೆ. ಆದರೆ ನಮ್ಮ ಸಂಘದ ಸದಸ್ಯರು ಕಚೇರಿಯಲ್ಲಿ ವಿಮೆ ಮಾಡಿಸಿದರೆ, ಉಚಿತ ಸೇವೆ ನೀಡಲಾಗುವುದು’ ಎಂದು ಪಿಕೆಪಿಎಸ್ ಅಧ್ಯಕ್ಷ ಓಂಕಾರ ಪಟ್ನೆ ತಿಳಿಸಿದರು.

ಯಾರು ಏನಂದರು?

ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಬೆಳೆಗಳು ಚೆನ್ನಾಗಿ ಬೆಳೆದಿವೆ. ರೈತರು ಹೊಲಗಳಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು – ಮಾರ್ತಾಂಡ ಮಾಚಕೂರಿ, ಸಹಾಯಕ ಕೃಷಿ ನಿರ್ದೇಶಕ

ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಸುರಿದಿದ್ದರಿಂದ ರೈತರು ಬೇಗ ಬಿತ್ತನೆ ಮಾಡಿದ್ದಾರೆ. ಬೆಳೆಗೆ ಪೂರಕವಾಗಿ ಮಳೆಯಾಗಿದ್ದರಿಂದ ಹೊಲಗಳಲ್ಲಿ ಬೆಳೆಗಳು ಚೆನ್ನಾಗಿ ಬೆಳೆಯುತ್ತಿವೆ – ನಾಗೇಶ ಮೇತ್ರೆ, ರೈತ ಮುಖಂಡ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರು ಬೆಳೆ ವಿಮೆಯ ಕಂತು ಪಾವತಿಸಿದರೆ ಸೇವಾ ಶುಲ್ಕದ ವಿನಾಯಿತಿ ದೊರೆಯುತ್ತದೆ. ರೈತರು ಪ್ರಯೋಜನ ಪಡೆಯಬೇಕು – ಓಂಕಾರ ಪಟ್ನೆ, ಪಿಕೆಪಿಎಸ್ ಅಧ್ಯಕ್ಷ

ಹೆಸರು ಬೆಳೆಗೆ ಎಲೆ ತಿನ್ನುವ ಹಸಿರು ಹುಳು ಕಾಟ ಕಾಣಿಸಿದೆ. ರೈತರು ಕ್ಲೋರೊಪೈರಿಫಾಸ್ 2 ಎಂ.ಎಲ್ ಅಥವಾ ಇಮಾಮೆಕ್ಸಿನ್ ಬೆಂಜೋಯೇಟ್ ಶೇ 5ರಷ್ಟು ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಎಸ್‌.ಜಿ ಹಾಕಿ ಸಿಂಪಡಿಸಬೇಕು – ವಿಶ್ವನಾಥ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಹುಲಸೂರ

ಹುಲಸೂರ ತಾಲ್ಲೂಕಿನ ಕೋಟಮಾಳ್ ಗ್ರಾಮದ ರೈತರ ಹೊಲದಲ್ಲಿ ಡ್ರೋನ್ ಮೂಲಕ ಸೋಯಾ ಅವರೆ ಬೆಳೆಗೆ ಔಷಧ ಸಿಂಪಡಿಸಲಾಯಿತು
ಹುಲಸೂರ ತಾಲ್ಲೂಕಿನ ರೈತರು ಎಡೆಹೊಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.