ADVERTISEMENT

ಕರಿಬೇವು ಕೃಷಿ | ಕೈತುಂಬಾ ಆದಾಯ: ಎಂಜಿನಿಯರಿಂಗ್‌ ಪದವೀಧರನ ಕೃಷಿ ಯಶಸ್ಸು

ನಾಗೇಶ ಪ್ರಭಾ
Published 8 ಮೇ 2025, 5:38 IST
Last Updated 8 ಮೇ 2025, 5:38 IST
ಬೀದರ್ ತಾಲ್ಲೂಕಿನ ಸುಲ್ತಾನಪುರದಲ್ಲಿ ಬೆಳೆದ ಕರಿಬೇವಿನೊಂದಿಗೆ ಕೃಷಿಕ ರವಿ ರೊಡ್ಡಾ
ಬೀದರ್ ತಾಲ್ಲೂಕಿನ ಸುಲ್ತಾನಪುರದಲ್ಲಿ ಬೆಳೆದ ಕರಿಬೇವಿನೊಂದಿಗೆ ಕೃಷಿಕ ರವಿ ರೊಡ್ಡಾ   

ಸುಲ್ತಾನಪುರ (ಜನವಾಡ): ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮದ ಸಿವಿಲ್ ಎಂಜಿನಿಯರಿಂಗ್ ಪದವೀಧರ ರವಿ ರೊಡ್ಡಾ ಅವರು ಎಂಜಿನಿಯರಿಂಗ್‌ ವೃತ್ತಿಯನ್ನು ತೊರೆದು ಕರಿಬೇವು ಕೃಷಿ ಮಾಡಿ, ಯಶಸ್ವಿಯಾಗಿದ್ದಾರೆ.

ರವಿ ಅವರು ಸುಲ್ತಾನಪುರದಲ್ಲಿ ಪಾಳು ಬಿದ್ದಿದ್ದ ತಮ್ಮ ಒಂದೂವರೆ ಎಕರೆ ಜಮೀನನ್ನು ಕೃಷಿ ಯೋಗ್ಯವಾಗಿಸಿ, 2023ರ ಆಗಸ್ಟ್‌ನಲ್ಲಿ 8,400 ಕರಿಬೇವು ಸಸಿಗಳನ್ನು ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿ, ಕೊಳವೆಬಾವಿಯಿಂದ ನೀರುಣಿಸಿದ್ದಾರೆ. ಒಂಬತ್ತು ತಿಂಗಳಲ್ಲಿ ಬಂಪರ್ ಬೆಳೆ ಬಂದಿದೆ.

2024ರ ಮೇ ನಲ್ಲಿ ಬೆಳೆಯ ಮೊದಲ ಕಟಾವು ಆಗಿದ್ದು, ಅಂದಿನಿಂದ ನಿತ್ಯ ಬೀದರ್‌ ಮಾರುಕಟ್ಟೆಯಲ್ಲಿ ಕರಿಬೇವು ಮಾರಾಟ ಮಾಡುತ್ತಿದ್ದಾರೆ. ಇದರಿಂದ ತಿಂಗಳಿಗೆ ₹90 ಸಾವಿರದಿಂದ ₹1 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ.

ADVERTISEMENT

ಸಹಾಯಕ ತೋಟಗಾರಿಕೆ ಅಧಿಕಾರಿ ಕಾಶಿನಾಥ ಸ್ವಾಮಿ ಮಾರ್ಗದರ್ಶನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಿನೊಂದಿಗೆ ಕರಿಬೇವು ಕೃಷಿ ಮಾಡಿದ್ದೇನೆ ಎಂದು ರವಿ ರೊಡ್ಡಾ ತಿಳಿಸಿದರು.

ಬೀಜ, ಗೊಬ್ಬರ, ಕೀಟನಾಶಕ, ಹನಿ ನೀರಾವರಿ ಪದ್ಧತಿ ಅಳವಡಿಕೆ, ಆಳುಗಳ ಕೂಲಿ ಸೇರಿ ಈವರೆಗೆ ₹ 2 ಲಕ್ಷ ಖರ್ಚು ಮಾಡಿದ್ದೇನೆ. 11 ತಿಂಗಳ ಅವಧಿಯಲ್ಲಿ ಎಲ್ಲ ಖರ್ಚು ಹೊರತುಪಡಿಸಿ, ಹೆಚ್ಚುವರಿ ₹ 6 ಲಕ್ಷ ಆದಾಯ ಬಂದಿದೆ ಎಂದು ಹೇಳುತ್ತಾರೆ.

ಕರಿಬೇವಿನ ಬೀಜ ತಂದು, ಸಸಿಯಾಗಿಸಿ, ನಾಟಿ ಮಾಡಿದ್ದೇನೆ. 28 ಸಾಲುಗಳಲ್ಲಿ 8,400 ಗಿಡಗಳು ಇವೆ. ಗಿಡಗಳ ಅಂತರ ಸಾಲಿನಿಂದ ಸಾಲಿಗೆ 6 ಅಡಿ ಹಾಗೂ ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರದಲ್ಲಿ ಗಿಡಗಳನ್ನು ನೆಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕರಿಬೇವು ಬೆಲೆ ಕೆ.ಜಿ.ಗೆ ₹ 60 ಇದೆ. ನಿತ್ಯ ಸರಾಸರಿ 50 ಕೆ.ಜಿ. ಇಳುವರಿ ಬರುತ್ತಿದ್ದು, ₹ 3 ಸಾವಿರ ಗಳಿಕೆ ಆಗುತ್ತಿದೆ ಎಂದು ಹೇಳುತ್ತಾರೆ.

ಕರಿಬೇವು ಬಹು ವಾರ್ಷಿಕ ಬೆಳೆಯಾಗಿದೆ. ಉತ್ತಮವಾಗಿ ನಿರ್ವಹಣೆ ಮಾಡಿದರೆ 20 ರಿಂದ 25 ವರ್ಷಗಳವರೆಗೆ ನಿರಂತರ ಫಲ ಕೊಡಲಿದೆ. ಎಂಜಿನಿಯರಿಂಗ್ ಪದವಿ ಪೂರೈಸಿದರೂ, ಮೊದಲಿನಿಂದಲೂ ಕೃಷಿಯತ್ತ ಹೆಚ್ಚಿನ ಒಲವು ಇತ್ತು. ಹೀಗಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ತೋಟಗಾರಿಕೆ ಬೆಳೆಯ ಯಶಸ್ಸು ಕೃಷಿಯಲ್ಲಿ ಮುಂದುವರಿಯಲು ಇನ್ನಷ್ಟು ಉತ್ಸಾಹ ನೀಡಿದೆ ಎಂದು ಹೇಳಿದರು.

ರವಿ ಅವರು ಕರಿಬೇವಿಗಷ್ಟೇ ಸೀಮಿತರಾಗಿಲ್ಲ. ತಮ್ಮ ಮುರೂವರೆ ಎಕರೆಯಲ್ಲಿ ನಿಂಬೆ, ಎರಡೂವರೆ ಎಕರೆಯಲ್ಲಿ ಪೇರಲ ಹಾಗೂ 1 ಎಕರೆಯಲ್ಲಿ ನುಗ್ಗೆ ಸಹ ಬೆಳೆದಿದ್ದಾರೆ.

ಭೂಮಿತಾಯಿ ನಂಬಿದವರ ಕೈಬಿಡಲ್ಲ. ಸಮರ್ಪಣಾ ಭಾವದಿಂದ ದುಡಿದರೆ ಕೃಷಿಯಲ್ಲಿ ಕೈತುಂಬಾ ಸಂಪಾದನೆ ಮಾಡಬಹುದು. ಇದಕ್ಕೆ ಕರಿಬೇವಿನ ಕೃಷಿ ಮಾಡಿ ಲಾಭ ಪಡೆದಿರುವುದೇ ನಿದರ್ಶನ
–ರವಿ ರೊಡ್ಡ ಕೃಷಿಕ
ಮಸಾಲೆ ಪದಾರ್ಥಗಳ ಸ್ವಾದ ಹೆಚ್ಚಿಸುವ ಕರಿಬೇವಿಗೆ ಬಹಳ ಬೇಡಿಕೆಯಿದೆ. ರೈತರು ಕರಿಬೇವು ಬೆಳೆದು ಆರ್ಥಿಕ ಸ್ಥಿತಿ ಸದೃಢಗೊಳಿಸಿಕೊಳ್ಳಬಹುದು
– ಸಚಿನ್ ಕೌಠಾ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.