ADVERTISEMENT

ತಹಶೀಲ್ದಾರ್‌ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ

ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಸಿಗದ ಜಾಗ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 12:31 IST
Last Updated 8 ಡಿಸೆಂಬರ್ 2018, 12:31 IST
ಔರಾದ್ ತಾಲ್ಲೂಕಿನ ಬೋಂತಿ ಗ್ರಾಮದಲ್ಲಿ ಅಂತ್ಯಕ್ರಿಯೆಗಾಗಿ ಜಾಗ ಸಿಗದೆ ಮಹಿಳೆಯ ಶವವನ್ನು ಅಟೊದಲ್ಲಿ ತಹಶೀಲ್ದಾರ್ ಕಚೇರಿಗೆ ತಂದಿರುವುದು
ಔರಾದ್ ತಾಲ್ಲೂಕಿನ ಬೋಂತಿ ಗ್ರಾಮದಲ್ಲಿ ಅಂತ್ಯಕ್ರಿಯೆಗಾಗಿ ಜಾಗ ಸಿಗದೆ ಮಹಿಳೆಯ ಶವವನ್ನು ಅಟೊದಲ್ಲಿ ತಹಶೀಲ್ದಾರ್ ಕಚೇರಿಗೆ ತಂದಿರುವುದು   

ಔರಾದ್: ತಾಲ್ಲೂಕಿನ ಬೋಂತಿಯಲ್ಲಿ ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಖಾಸಗಿ ಜಮೀನು ಮಾಲೀಕ ಅವಕಾಶ ನೀಡದ್ದರಿಂದ ಮಹಿಳೆಯ ಕುಟುಂಬದ ಸದಸ್ಯರು ಶನಿವಾರ ಇಲ್ಲಿನ ತಹಶೀಲ್ದಾರ್‌ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಬೋಂತಿಯ ಲಾಲುಬಾಯಿ ರಾಜಪ್ಪ(65) ಶುಕ್ರವಾರ ಸಂಜೆ ಮೃತಪಟ್ಟಿದ್ದರು. ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಶನಿವಾರ ಬೆಳಿಗ್ಗೆ ಖಾಸಗಿ ಜಮೀನಿನಲ್ಲಿ ಲಾಲುಬಾಯಿ ಅಂತ್ಯ ಸಂಸ್ಕಾರ ಮಾಡಲು ಮುಂದಾದಾಗ ಜಮೀನು ಮಾಲೀಕ ಆಕ್ಷೇಪ ವ್ಯಕ್ತಪಡಿಸಿ ತನ್ನ ಜಮೀನಿನಲ್ಲಿ ಶವ ಸಂಸ್ಕಾರ ಮಾಡದಂತೆ ಎಚ್ಚರಿಕೆ ನೀಡಿದರು.

ಶವ ಸಂಸ್ಕಾರಕ್ಕೆ ಜಾಗ ದೊರೆಯದ ಕಾರಣ ಲಾಲುಬಾಯಿ ಕುಟುಂಬದ ಸದಸ್ಯರು ಶವವನ್ನು ಗೂಡ್ಸ್‌ ಆಟೊದಲ್ಲಿ ಹಾಕಿಕೊಂಡು ಔರಾದ್‌ಗೆ ಬಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ADVERTISEMENT

‘ಬೋಂತಿಯಲ್ಲಿ ದಲಿತರು ಮೃತಪಟ್ಟರೆ ಶವಸಂಸ್ಕಾರಕ್ಕೆ ಜಾಗ ಸಿಗುತ್ತಿಲ್ಲ. ಸರ್ಕಾರ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡದ ಕಾರಣ ತೊಂದರೆ ಅನುಭವಿಸಬೇಕಾಗಿದೆ’ ಎಂದು ದಲಿತ ಮುಖಂಡ ಅಶೋಕ ದರಬಾರೆ ಹಾಗೂ ವೈಜಿನಾಥ ವಡೆಯರ್ ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಎಂ. ಚಂದ್ರಶೇಖರ ಮೃತ ಮಹಿಳೆಯ ಕುಟುಂಬದವರ ಸಮಸ್ಯೆ ಆಲಿಸಿ ಬೋಂತಿಗೆ ತೆರಳಿ ಅಲ್ಲಿನ ಸರ್ಕಾರಿ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಿಸಿದರು. ನಂತರ ತ್ವೇಷಮಯ ಪರಿಸ್ಥಿತಿ ತಿಳಿಗೊಂಡಿತು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.