ADVERTISEMENT

ಧರ್ಮ ಸಮ್ಮೇಳನಕ್ಕೆ ನಾಲ್ವರು ಕೇಂದ್ರ ಸಚಿವರು: ಶಾಸಕ ಶರಣು ಸಲಗರ

ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಶರಣು ಸಲಗರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:58 IST
Last Updated 21 ಸೆಪ್ಟೆಂಬರ್ 2025, 7:58 IST
ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸಿದ್ದಗೊಂಡಿರುವ ದಸರಾ ಧರ್ಮ ಸಮ್ಮೇಳನದ ಮಾನವ ಧರ್ಮ ಮಂಟಪವನ್ನು ಶನಿವಾರ ಶಾಸಕ ಶರಣು ಸಲಗರ ವೀಕ್ಷಿಸಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಇದ್ದರು
ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸಿದ್ದಗೊಂಡಿರುವ ದಸರಾ ಧರ್ಮ ಸಮ್ಮೇಳನದ ಮಾನವ ಧರ್ಮ ಮಂಟಪವನ್ನು ಶನಿವಾರ ಶಾಸಕ ಶರಣು ಸಲಗರ ವೀಕ್ಷಿಸಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಇದ್ದರು   

ಬಸವಕಲ್ಯಾಣ: ‘ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಗರದಲ್ಲಿ ಆಯೋಜಿಸಿರುವ ದಸರಾ ಧರ್ಮ ಸಮ್ಮೇಳನಕ್ಕೆ ನಾಲ್ವರು ಕೇಂದ್ರ ಸಚಿವರು, ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಜರಿರುವರು’ ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತೀನ ಗಡ್ಕರಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಪ್ರತ್ಯೇಕ ದಿನಗಳಂದು ಬರಲು ಒಪ್ಪಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭಾಗವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಮಳೆ ಗಾಳಿಯಿಂದ ತೊಂದರೆ ಆಗದಂತ ಬೃಹತ್ ಮಂಟಪ, ಆಕರ್ಷಕ ಮಹಾದ್ವಾರ ಮತ್ತು ವೇದಿಕೆ ಸಿದ್ಧಗೊಂಡಿದೆ. ಪಕ್ಕದ ತೇರು ಮೈದಾನದಲ್ಲಿ ದಾಸೋಹ ವ್ಯವಸ್ಥೆ ಇರಲಿದೆ. ಇಲ್ಲಿ ಎಂದೂ ನಡೆಯದ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ. ಹಾರಕೂಡಶ್ರೀಗಳ ನೇತೃತ್ವದಿಂದಾಗಿ ಬಹಳಷ್ಟು ಅನುಕೂಲ ಆಗಿದೆ’ ಎಂದರು.

ಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿ, ‘ಧರ್ಮ ಮಾರ್ಗದಲ್ಲಿ ನಡೆದು ಸುಖ ಶಾಂತಿ ಮತ್ತು ನೆಮ್ಮದಿಯಿಂದ ಬದುಕುವುದಕ್ಕೆ ಈ ಸಮಾರಂಭ ಪ್ರೇರಣೆ ನೀಡಲಿದೆ’ ಎಂದರು. ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಧರ್ಮ ಸಮ್ಮೇಳನ ಹಮ್ಮಿಕೊಳ್ಳುವ ಭಾಗ್ಯ ದೊರೆತಿದೆ. ಹತ್ತು ದಿನಗಳವರೆಗೆ ಎಲ್ಲರೂ ಉಪಸ್ಥಿತರಿದ್ದು ಕಣ್ಮನ ತಣಿಸಿಕೊಳ್ಳಬೇಕು’ ಎಂದರು.

ADVERTISEMENT

ಮುಖಂಡ ಸುನಿಲ ಪಾಟೀಲ, ಜಗನ್ನಾಥ ಪಾಟೀಲ ಮಂಠಾಳ, ವಕ್ತಾರ ಸುರೇಶ ಸ್ವಾಮಿ, ಮಲ್ಲಯ್ಯಸ್ವಾಮಿ ಹಿರೇಮಠ, ಡಾ.ಬಸವರಾಜ ಸ್ವಾಮಿ, ಡಾ.ಜಿ.ಎಸ್.ಭುರಳೆ, ಕಲ್ಪನಾ ಶೀಲವಂತ, ಸೂರ್ಯಕಾಂತ ಮಠ ಪಂಢರಗೇರಾ, ಸಿದ್ದು ಬಿರಾದಾರ ಉಪಸ್ಥಿತರಿದ್ದರು.

ಪ್ರಥಮ ಪೂರ್ವಭಾವಿ ಸಭೆಯಲ್ಲಿಯೇ ಚನ್ನವೀರ ಶಿವಾಚಾರ್ಯರ ಪ್ರಭಾವದಿಂದ ₹ 54 ಲಕ್ಷ ದೇಣಿಗೆ ಬಂತು. 5 ದಿನದ ದಾಸೋಹವೂ ಹಾರಕೂಡ ಶ್ರೀಗಳದ್ದಾಗಿದೆ
ಶರಣು ಸಲಗರ ಶಾಸಕ
ಇದೇ ಪ್ರಥಮ ಸಲ ರಂಭಾಪುರಿ ಪೀಠದ ಧರ್ಮ ಸಮ್ಮೇಳನದಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲಾಗಿದೆ. ಇದು ಜಾತ್ಯತೀತ ಮತ್ತು ಪಕ್ಷಾತೀತ ಕಾರ್ಯಕ್ರಮವಾಗಿದೆ.
ಚನ್ನವೀರ ಶಿವಾಚಾರ್ಯರು ಹಾರಕೂಡ

‘ಶಾಸಕ ಶರಣು ಸಲಗರ ಕನಸು’

‘ಐದು ವರ್ಷಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ನಗರಕ್ಕೆ ಬಂದಿದ್ದ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರಿಗೆ ಶರಣು ಸಲಗರ ಭೇಟಿಯಾಗಿ ನಾನು ಶಾಸಕನಾಗಿ ಆಯ್ಕೆಗೊಂಡರೆ ದಸರಾ ಧರ್ಮಸಮ್ಮೇಳನ ಆಯೋಜಿಸುತ್ತೇನೆ ಎಂದು ವಾಗ್ದಾನ ಮಾಡಿದ್ದರು’ ಎಂದು ಹಾರಕೂಡ ಚನ್ನವೀರ ಶಿವಾಚಾರ್ಯರು ನೆನಪಿಸಿಕೊಂಡರು. ‘ಇಲ್ಲಿ ಕೆಲ ವರ್ಷಗಳ ಹಿಂದೆ ರಂಭಾಪುರಿ ಪೀಠಾಧ್ಯಕ್ಷರ ನೇತೃತ್ವದಲ್ಲಿ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಆಯೋಜಿಸಿದ್ದ ಮುಖಂಡ ಸುನಿಲ ಪಾಟೀಲ ಅವರೂ ಈ ಸಮಾರಂಭದ ಯಶಸ್ವಿಗೆ ದುಡಿಯುತ್ತಿದ್ದಾರೆ. ದಯಾನಂದ ಶೀಲವಂತರ ಪ್ರಯತ್ನ ಸುರೇಶ ಸ್ವಾಮಿಯವರ ಶ್ರಮವೂ ಇದೆ. ಸೋಮಶೇಖರಯ್ಯ ವಸ್ತ್ರದ ಅವರು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಆಗಿದ್ದಾಗ ದೇವಸ್ಥಾನದ ಶಿಖರವನ್ನು ರಂಭಾಪುರಿ ಮತ್ತು ಕಾಶಿಯ ಉಭಯ ಶಿವಾಚಾರ್ಯರಿಂದ ಉದ್ಘಾಟಿಸಿ ಧರ್ಮ ಕಾರ್ಯ ನೆರವೇರಿಸಿದ್ದರು’ ಎಂದು ಕೂಡ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.