ADVERTISEMENT

ಒಳಪಂಗಡಗಳನ್ನು ಬದಿಗಿಟ್ಟು ಒಂದಾಗಿ: ಅಧ್ಯಕ್ಷ ವಿಜಯೇಂದ್ರ ಸಲಹೆ

ದಸರಾ ಧರ್ಮ ಸಮ್ಮೇಳನದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:39 IST
Last Updated 23 ಸೆಪ್ಟೆಂಬರ್ 2025, 4:39 IST
ಬಸವಕಲ್ಯಾಣದಲ್ಲಿ ಸೋಮವಾರ ರಂಭಾಪುರಿ ಶ್ರೀಯವರ ನೇತೃತ್ವದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು
ಬಸವಕಲ್ಯಾಣದಲ್ಲಿ ಸೋಮವಾರ ರಂಭಾಪುರಿ ಶ್ರೀಯವರ ನೇತೃತ್ವದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು   

ಬಸವಕಲ್ಯಾಣ: ‘ಒಳಪಂಗಡಗಳನ್ನು ಬದಿಗಿಟ್ಟು ವಿರಶೈವ ಲಿಂಗಾಯತರು ಒಂದಾಗಿ ಶಕ್ತಿ ಪ್ರದರ್ಶಿಸುವ ಅಗತ್ಯವಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.
ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಸೋಮವಾರ ರಾತ್ರಿ ನಡೆದ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೀರಶೈವ ಲಿಂಗಾಯತ ಆಲದ ಮರ ಇದ್ದಂತೆ. ಅನ್ಯ ಜಾತಿಯವರಿಗೂ ನೆರಳು ಕೊಡುತ್ತದೆ. ವೀರಶೈವ ಮಠ ಮಾನ್ಯಗಳು, ಅನ್ನ, ಜ್ಞಾನ ನೀಡುವ ಕೇಂದ್ರಗಳಾಗಿವೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ, ಧರ್ಮದಲ್ಲಿ ರಾಜಕಾರಣ ನುಸುಳಬಾರದು. ಪ್ರತಿವರ್ಷ ಬೇರೆ ಬೇರೆ ಕಡೆ ಆಯೋಜಿಸುವ ದಸರಾ ದರ್ಬಾರ್‌ ಕಾರ್ಯಕ್ರಮಗಳನ್ನು ಇದುವರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದ್ದಾರೆ. ಆದರೆ, ಈ ಸಲ ಅನಿವಾರ್ಯ ಕಾರಣಗಳಿಂದ ಅವರು ಬಂದಿಲ್ಲ. ಅವರ ಬದಲಾಗಿ ನಾನು ಬರಬೇಕಾಯಿತು. ಇಲ್ಲಿನ ಅನುಭವ ಮಂಟಪಕ್ಕೂ ಯಡಿಯೂರಪ್ಪ ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ವೀರಶೈವ ಲಿಂಗಾಯತ ಒಂದೇ ಎಂಬ ಕೂಗಿಗೆ ಸಹಮತ ವ್ಯಕ್ತಪಡಿಸಿ ಸಮಾಜದ ಒಗ್ಗಟ್ಟಿಗೆ ಪ್ರೇರಣೆ ಒದಗಿಸಿದ್ದಾರೆ. ಬಸವಣ್ಣನವರು ಇವನಾರವ ಇವನಾರವ ಎನ್ನಬೇಡ ಎಂದು ಸಾರಿದ್ದಾರೆ. ಆದರೆ, ನಾವು ಅವ ನಮ್ಮವನಲ್ಲ ಎಂದು ಹೇಳಿ ದೂರ ಸರಿಸುತ್ತಿರುವುದು ಎಷ್ಟು ಸರಿ? ದಸರಾ ಒಳಿತಿನ ವಿಜಯದ ಹಬ್ಬ. ಉಪಕಾರ ಮಾಡಿದವರನ್ನು ಸ್ಮರಿಸಬೇಕು. ಈ ಭಾಗದಲ್ಲಿ ಅತಿವೃಷ್ಟಿಯಿಂದ ಅಪಾರ ಬೆಳೆ ಹಾನಿ ಆಗಿದ್ದು ಪರಿಹಾರ ನೀಡಲು ಶತಪ್ರಯತ್ನ ನಡೆಸುತ್ತೇನೆ’ ಎಂದು ಹೇಳಿದರು.

ಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿ, ‘ಅರಿವು ಮತ್ತು ಆಚಾರಗಳ ಸಂಗಮವೇ ನಿಜವಾದ ವೀರಶೈವ ತತ್ವ ಬೋಧನೆಯಾಗಿದೆ. ಮನದ ಮೈಲಿಗೆ ಕಳೆಯುವವನೇ ನಿಜವಾದ ಗುರು’ ಎಂದು ತಿಳಿಸಿದರು. 

ನೇತೃತ್ವ ವಹಿಸಿದ್ದ ರಂಭಾಪುರಿ ಶ್ರೀ ಮಾತನಾಡಿ, ‘ಸಂಸ್ಕೃತಿ ಮತ್ತು ಪರಂಪರೆಯ ಪರಿಪಾಲನೆಯಿಂದ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ಭಾರತೀಯ ಸಂಪ್ರದಾಯದಲ್ಲಿ ದಸರಾಕ್ಕೆ ಬಹಳಷ್ಟು ಮಹತ್ವವಿದೆ’ ಎಂದರು.

ADVERTISEMENT

ಶಾಸಕ ಶರಣು ಸಲಗರ ಮಾತನಾಡಿ, ‘ನಾನು ಶಾಸಕನಾದರೆ ನಗರದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಸುತ್ತೇನೆ ಎಂದು ರಂಭಾಪುರಿಶ್ರೀ ಅವರಿಗೆ ಮಾತು ಕೊಟ್ಟಿದ್ದೆ. ಅದರಂತೆ ಸಮಾರಂಭ ಏರ್ಪಡಿಸಲಾಗಿದೆ. ಮಳೆಯಿಂದ ಈ ಭಾಗದ ರೈತರು ಕಷ್ಟದಲ್ಲಿದ್ದು ದೇವರು ಮತ್ತು ಗುರುಗಳು ಅವರ ಮೇಲೆ ಕರುಣೆ ತೋರಬೇಕು’ ಎಂದರು.

ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ, ಡಾ.ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿದರು. ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಪ್ರಭು ಚವಾಣ್‌ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.