ಬೀದರ್: ‘ಒಳಮೀಸಲಾತಿ ಜಾರಿಗೆ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಈಗ ತಾಳ್ಮೆಯ ಕಟ್ಟೆ ಒಡೆದಿದ್ದು, ಏಪ್ರಿಲ್ 5ರೊಳಗೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ’ ಎಂದು ಮಾದಿಗ ಹೋರಾಟ ಸಮನ್ವಯ ಸಮಿತಿ ರಾಜ್ಯ ಪ್ರಮುಖ ಭಾಸ್ಕರ್ ಪ್ರಸಾದ ಎಚ್ಚರಿಕೆ ನೀಡಿದರು.
‘ಏ.5ರಂದು ಬಾಬು ಜಗಜೀವನರಾಂ ಅವರ ಜಯಂತಿ ಉತ್ಸವ ಇದೆ. ಅಷ್ಟರೊಳಗೆ ಒಳಮೀಸಲಾತಿ ಜಾರಿಗೆ ನಿರ್ಧಾರ ಕೈಗೊಳ್ಳಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮಾಜದ ಮುಖಂಡರು ಭೇಟಿ ಮಾಡಿದ್ದು, ವಾರದ ಗಡುವು ಕೇಳಿದ್ದಾರೆ. ಆದರೆ, ನಾವು ಸರ್ಕಾರಕ್ಕೆ 12 ದಿನಗಳ ಕಾಲಾವಕಾಶ ನೀಡಿದ್ದೇವೆ. ಗಡುವು ಮೀರಿದ ನಂತರ ಕ್ರಮ ಕೈಗೊಳ್ಳದಿದ್ದಲ್ಲಿ ವಿಧಾನಸೌಧದ ಮೆಟ್ಟಿಲುಗಳಲ್ಲಿ ಹೆಣಗಳನ್ನು ನೋಡುವಿರಿ’ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
‘ಗೃಹಸಚಿವ ಡಾ. ಜಿ.ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪನವರು ಒಳಮೀಸಲಾತಿಗೆ ಸಂಪುಟದಲ್ಲಿ ದೊಡ್ಡ ಮಟ್ಟದಲ್ಲಿ ವಿರೋಧಿಸಿದ್ದಾರೆ. ಮಾದಿಗ ಸಮಾಜದ ಸಚಿವರಾದ ಆರ್.ಬಿ. ತಿಮ್ಮಾಪುರ ಹಾಗೂ ಕೆ.ಎಚ್.ಮುನಿಯಪ್ಪ ಅವರು ಮೌನಕ್ಕೆ ಜಾರಿದ್ದಾರೆ. ಅಸಹಾಯಕತೆ ವ್ಯಕ್ತಪಡಿಸಿರುವುದು ದುರದೃಷ್ಟಕರ’ ಎಂದರು.
‘ಈಗಾಗಲೇ ಹರಿಯಾಣ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಸುಪ್ರೀಂಕೋರ್ಟ್ ಸಹ ಈ ಸಂಬಂಧ ತೀರ್ಪು ಪ್ರಕಟಿಸಿದೆ. ಆದರೆ, ರಾಜ್ಯದಲ್ಲಿ ಸರ್ಕಾರ ಒಳಮೀಸಲಾತಿ ಜಾರಿಗೊಳಿಸದೆ ಭಂಡತನ ಪ್ರದರ್ಶಿಸುತ್ತಿದೆ. 35 ವರ್ಷಗಳಿಂದ ಒಳಮೀಸಲಾತಿಗೆ ಹೋರಾಟ ಮಾಡುತ್ತಿರುವ ಈ ಸಮಾಜಕ್ಕೆ ಸರ್ಕಾರ ಘೋರ ಅನ್ಯಾಯ ಮಾಡಿದೆ. 38 ವರ್ಷಗಳ ಕಾಲ ಇದೇ ಕಾಂಗ್ರೆಸ್ ಸರ್ಕಾರ ರಾಜ್ಯವಾಳಿದರೂ ನಮ್ಮನ್ನು ನಿರಂತರವಾಗಿ ತುಳಿಯುತ್ತ ಬಂದಿದೆ’ ಎಂದು ಆರೋಪಿಸಿದರು.
‘ಸರ್ಕಾರಕ್ಕೆ ನಿಜವಾಗಿಯೂ ಮಾದಿಗರ ಬಗ್ಗೆ ಕಾಳಜಿಯಿದ್ದರೆ ಬಾಬು ಜಗಜೀವನರಾಂ ಜಯಂತಿಗೆ ಖುಷಿ ಸುದ್ದಿ ಘೋಷಿಸಬೇಕು. ಇಲ್ಲವಾದಲ್ಲಿ ಬೆಂಗಳೂರಿನಲ್ಲಿ ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.
ಮುಖಂಡರಾದ ದೇವಿದಾಸ ತುಮಕುಂಟೆ, ರಮೇಶ ಕಟ್ಟಿತೂಗಾಂವ, ಕಲ್ಲಪ್ಪ ವೈದ್ಯ, ಸ್ವಾಮಿದಾಸ ಕೆಂಪೆನೋರ್, ಬಂಟಿ ದರ್ಬಾರೆ, ಪ್ರದೀಪ ಹೆಗಡೆ, ಪೀಟರ್ ಶ್ರೀಮಂಡಲ, ಶಿವರಾಜ ನೆಲವಾಳಕರ್, ಬಸವರಾಜ ಔರಾದೆ, ರಾಜಕುಮಾರ ಹಳ್ಳಿಖೇಡ್, ಶಿವರಾಜ ಮುಗನೂರೆ, ದಾವೀದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.