ADVERTISEMENT

ಬೀದರ್‌ | ವಿಕೇಂದ್ರೀಕರಣದಿಂದ ಅಭಿವೃದ್ಧಿ, ಬದಲಾವಣೆ ಸಾಧ್ಯ–ಬಹಾದ್ದೂರ ದೇಸಾಯಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 8:02 IST
Last Updated 27 ಜನವರಿ 2026, 8:02 IST
ಪುಸ್ತಕ ಸಂತೆ ಅಂಗವಾಗಿ ಬೀದರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಗೋಷ್ಠಿಯಲ್ಲಿ ಶಾಸಕ ಪ್ರಭು ಚವಾಣ್‌ ಮಾತನಾಡಿದರು
ಪುಸ್ತಕ ಸಂತೆ ಅಂಗವಾಗಿ ಬೀದರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಗೋಷ್ಠಿಯಲ್ಲಿ ಶಾಸಕ ಪ್ರಭು ಚವಾಣ್‌ ಮಾತನಾಡಿದರು   

ಬೀದರ್‌: ‘ಅಧಿಕಾರ ವಿಕೇಂದ್ರೀಕರಣದಿಂದಷ್ಟೇ ಅಭಿವೃದ್ಧಿ, ಬದಲಾವಣೆ ಕಾಣಲು ಸಾಧ್ಯ’ ಎಂದು ಹಿರಿಯ ಪತ್ರಕರ್ತ ಹೃಷಿಕೇಶ ಬಹಾದ್ದೂರ ದೇಸಾಯಿ ಅಭಿಪ್ರಾಯಪಟ್ಟರು.

ಪುಸ್ತಕ ಸಂತೆಯ ಅಂಗವಾಗಿ ಸೋಮವಾರ ನಗರದ ಸಾಯಿ ಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ‘ಬೀದರ್‌ ಜಿಲ್ಲೆಯ ಅಭಿವೃದ್ಧಿ ಸಾಧ್ಯತೆಗಳು’ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸ್ಥಳೀಯ ಮಟ್ಟದಲ್ಲಿ ಖರ್ಚು ಮಾಡುವ, ಸ್ಥಳೀಯವಾಗಿ ಏನು ಬೇಕು ಎನ್ನುವುದನ್ನು ಅರಿತುಕೊಂಡು ಯೋಜನೆಗಳನ್ನು ರೂಪಿಸುವುದಿಲ್ಲವೋ ಅಲ್ಲಿಯ ತನಕ ಅಭಿವೃದ್ಧಿ ಸಾಧ್ಯವಿಲ್ಲ. ನಾವು ಆಯ್ಕೆ ಮಾಡುತ್ತಿರುವ ಜನಪ್ರತಿನಿಧಿಗಳ ಹಿತಾಸಕ್ತಿಗಳು ಸಾಕಷ್ಟು ಬದಲಾಗಿವೆ. ಅವರು ಬೆಂಗಳೂರು, ದೆಹಲಿಗೆ ಹೋಗುತ್ತಿರುವುದು ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳಲು ಹೊರತು ಜನಪರವಾದ ಯೋಜನೆಗಳನ್ನು ರೂಪಿಸುವುದಕ್ಕಾಗಿ ಅಲ್ಲ ಎಂದರು.

ADVERTISEMENT

ಮಹಾರಾಷ್ಟ್ರದಲ್ಲಿ ಒಂದು ಹಳ್ಳಿಗೆ ಒಂದು ಗ್ರಾಮ ಪಂಚಾಯಿತಿ ಇದೆ. ನಮ್ಮ ರಾಜ್ಯದಲ್ಲಿ ವ್ಯತಿರಿಕ್ತವಾದ ಪರಿಸ್ಥಿತಿ ಇದೆ. ಪಶ್ಚಿಮ ಬಂಗಾಳದಲ್ಲಿ ಗ್ರಾ.ಪಂ ಅಧ್ಯಕ್ಷನಿಗೆ ಸಹಿ ಹಾಕುವ ಅಧಿಕಾರ ಇದೆ. ಕೇರಳದಲ್ಲಿ ಶಾಲಾ–ಕಾಲೇಜುಗಳನ್ನು ಗ್ರಾಮ ಪಂಚಾಯಿತಿಗಳು ನಡೆಸುತ್ತಿವೆ.ಪ್ರತಿ ವರ್ಷ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಹುತೇಕ ಶಾಸಕರು ಮಾತನಾಡುವುದೇ ಇಲ್ಲ. ಇವರು ಮಾತನಾಡದಿದ್ದರೆ ಮಂಡ್ಯ, ಮೈಸೂರಿನ ಶಾಸಕರು ಮಾತನಾಡುತ್ತಾರೆಯೇ? ಉತ್ತರ ಕರ್ನಾಟಕದ ಮಂದಿಗೆ ಏನು ಕೇಳಬೇಕೆಂಬುದು ಗೊತ್ತಿಲ್ಲ. ಏನು ಕೇಳಬೇಕೆಂಬುದು ಗೊತ್ತಿದ್ದರೆ ಕೊಡುವವನು ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ ಎಂದು ಹೇಳಿದರು.

ಮುಖಂಡ ಶ್ರೀಕಾಂತ ಸ್ವಾಮಿ ಮಾತನಾಡಿ, ‘ಬೀದರ್‌ ಜಿಲ್ಲೆ ಅಭಿವೃದ್ಧಿ ಬಗ್ಗೆ ರಾಜಕಾರಣಿಗಳು ಚಿಂತಿಸಬೇಕು ಅಂತಿಲ್ಲ. ಪ್ರತಿಯೊಬ್ಬರೂ ಅದರ ಬಗ್ಗೆ ಚಿಂತಿಸಿ, ಅದರ ಅನುಷ್ಠಾನಕ್ಕೆ ಸರ್ಕಾರದ ಗಮನಕ್ಕೆ ತರುವ ಕೆಲಸವಾಗಬೇಕಿದೆ. ಸರ್ಕಾರ ಕೂಡ ಬೀದರ್‌ ಜಿಲ್ಲೆಯನ್ನು ಕಡೆಗಣಿಸುತ್ತ ಬಂದಿದೆ. ಜನರ ಆರ್ಥಿಕ ಅಭಿವೃದ್ಧಿ ಆಗಬೇಕು. ಅಂತಹ ಕೈಗಾರಿಕೆಗಳು ಆಗಿಲ್ಲ. ಆಗಬೇಕಿದೆ’ ಎಂದರು.

ಜ್ಞಾನಸುಧಾ ಶಾಲೆಯ ನಿರ್ದೇಶಕ ಮೌನೇಶ್‌ ಲಾಖಾ, ‘ಹನ್ನೆರಡು ವರ್ಷಗಳ ಹಿಂದೆ ಬೀದರ್‌ ಜಿಲ್ಲೆಯಲ್ಲಿದ್ದ ಪರಿಸ್ಥಿತಿ ಈಗಿಲ್ಲ. ಹಿಂದೆ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ಬೀದರ್‌ ಜಿಲ್ಲೆಗೆ ವರ್ಗಾವಣೆ ಮಾಡಿದರೆ ಯಾಕಪ್ಪ ಅಲ್ಲಿಗೆ ಟ್ರಾನ್ಸಫರ್‌ ಮಾಡಿದ್ದಾರೆ ಎಂದು ಕೇಳುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಸ್ಥಳೀಯ ಜನರು ಸೌಮ್ಯ ಸ್ವಭಾವದವರು. ಉತ್ತಮ ರಸ್ತೆ, ರೆಸಾರ್ಟ್‌, ವಾಯು ಸಂಪರ್ಕ, ಉತ್ತಮ ರೈಲು ಸಂಪರ್ಕ ಇದೆ. ಮೂಲಭೂತ ಸೌಲಭ್ಯ ಕೂಡ ಸುಧಾರಿಸಿದೆ. ಇಂಟರ್‌ನೆಟ್‌, ವಿದ್ಯುತ್‌ ವ್ಯವಸ್ಥೆ 24X7 ಮಟ್ಟಿಗೆ ಚೆನ್ನಾಗಿದೆ. ಬೆಂಗಳೂರು ಕೇಂದ್ರೀತ ಅಭಿವೃದ್ಧಿಯಾಗುತ್ತಿದ್ದು, ಅದು ಬದಲಾದರೆ ಈ ಭಾಗ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

ಆಯೋಜಕ ಗುರುನಾಥ ರಾಜಗೀರಾ ಇದ್ದರು.

ಲಂಡನ್‌ನಲ್ಲಿರುವ ಸೌಕರ್ಯ ಅಲ್ಲಿನ ಹಳ್ಳಿಗಳಲ್ಲಿ ಮುಖಂಡ ಬಸವರಾಜ ಧನ್ನೂರ ಮಾತನಾಡಿ ಲಂಡನ್‌ನಲ್ಲಿ ಏನೆಲ್ಲ ಸೌಕರ್ಯಗಳಿವೆಯೋ ಅಲ್ಲಿನ ಗ್ರಾಮಗಳಲ್ಲಿ ಆ ರೀತಿಯ ಸೌಕರ್ಯಗಳಿವೆ. ಅಲ್ಲಿನ ಜನ ಹಳ್ಳಿಗಳಲ್ಲಿ ಇರಲು ಇಷ್ಟಪಡುತ್ತಾರೆ. ಹಳ್ಳಿಗಳಲ್ಲಿ ಇರಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿಗೆ ಹೋಗಿ ಅಪಾರ್ಟ್‌ಮೆಂಟ್‌ನಲ್ಲಿ ಇರುವುದಲ್ಲ. ಹಳ್ಳಿಗಳಲ್ಲಿ ಜನಪ್ರತಿನಿಧಿಗಳು ಉಳಿದುಕೊಂಡರೆ ಅವುಗಳ ಸಮಸ್ಯೆ ಬೇಕು ಬೇಡ ಅರ್ಥವಾಗುತ್ತದೆ. ತಂತ್ರಜ್ಞಾನದಲ್ಲಿ ಸಾಕಷ್ಟು ಕ್ರಾಂತಿಯಾಗಿದೆ. ಆದರೆ ಕೃಷಿಯಲ್ಲಿ ಈಗಲೂ ಹೆಚ್ಚಿನ ಬದಲಾವಣೆ ಆಗಿಲ್ಲ. ಕೃಷಿ ಕ್ಷೇತ್ರ ಎಲ್ಲಿಯವರೆಗೆ ಅಭಿವೃದ್ಧಿ ಆಗುವುದಿಲ್ಲವೋ ಈ ದೇಶ ಹಳ್ಳಿಗಳು ಉದ್ಧಾರವಾಗುವುದಿಲ್ಲ ಎಂದು ತಿಳಿಸಿದರು.

ಸೋಷಿಯಲ್‌ ಮೀಡಿಯಾ ಬಿಟ್ಟು ಪುಸ್ತಕ ಓದಿ ‘ಸೋಷಿಯಲ್‌ ಮೀಡಿಯಾಗಳಲ್ಲಿ ಬರುವ ಹೆಚ್ಚಿನ ಸಂಗತಿಗಳು ಸುಳ್ಳಿರುತ್ತವೆ. ಆದರೆ ಪುಸ್ತಕಗಳು ಹಾಗಲ್ಲ. ಆದಕಾರಣ ಪುಸ್ತಕಗಳನ್ನು ಓದುವುದು ರೂಢಿಸಿಕೊಳ್ಳಬೇಕು’ ಎಂದು ಶಾಸಕ ಪ್ರಭು ಚವಾಣ್‌ ಸಲಹೆ ಮಾಡಿದರು. ಗಡಿ ಜಿಲ್ಲೆಯಲ್ಲಿ ಅದ್ದೂರಿಯಾಗಿ ಪುಸ್ತಕ ಸಂತೆ ಏರ್ಪಡಿಸಿರುವುದು ಖುಷಿ ತಂದಿದೆ. ಬೆಂಗಳೂರಿನಲ್ಲಿ ಪುಸ್ತಕ ಸಂತೆಗಳಾಗಿವೆ. ಬೀದರ್‌ನಲ್ಲಿ ಆಗಿರಲಿಲ್ಲ. ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮಗಳಾಗಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.