ಬಸವಕಲ್ಯಾಣ: ‘ಬಸವಾದಿ ಶರಣರ ಕಾಯಕಭೂಮಿಯಾದ ಈ ನೆಲದಲ್ಲಿ 2027ರಲ್ಲಿ ಬಸವಭಾರತ ಉತ್ಸವ ಆಯೋಜಿಸಲು ನಿರ್ಣಯಿಸಲಾಗಿದೆ’ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಚಾಲಕ ಬಸವರಾಜ ಪಾಟೀಲ ಸೇಡಂ ತಿಳಿಸಿದ್ದಾರೆ.
ನಗರದಲ್ಲಿ ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದ ಅವರು, ‘ಬಸವತತ್ವ ಸಾರುವುದು, ಮಾನವೀಯ ಮೌಲ್ಯ ಬಿತ್ತುವುದು, ಜಾಗತಿಕ ಸೌಹಾರ್ದತೆ ಬೆಸೆಯುವ ಉತ್ಸವ ಇದಾಗಲಿದೆ. 2027ರ ಡಿಸೆಂಬರ್ 23ರಿಂದ 27 ರವರೆಗೆ ಉತ್ಸವ ನಡೆಯಲಿದೆ. ಉತ್ಸವದಲ್ಲಿ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸಂಘ ಸಂಸ್ಥೆಯವರು ಸಹಕರಿಸಬೇಕು’ ಎಂದು ಹೇಳಿದರು.
ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಬಸವ ಭಾರತ ಉತ್ಸವ ಉತ್ತಮ ಆಶಯ ಹೊಂದಿದೆ. ಉತ್ಸವದ ಮೊದಲ ದಿನದ ದಾಸೋಹ ವ್ಯವಸ್ಥೆ ತಮ್ಮ ಮಠದಿಂದ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಮಾತನಾಡಿ, ‘ಈ ನೆಲದ ಉದಾತ್ತ ತತ್ವ ವಿಶ್ವದಾದ್ಯಂತ ಪಸರಿಸಲಿ. ಎಲ್ಲೆಡೆಯ ಜನ ಕಲ್ಯಾಣದ ಕಡೆ ಮುಖ ಮಾಡಬೇಕು ಎಂಬುದೇ ಉತ್ಸವ ಧ್ಯೇಯವಾಗಿದೆ’ ಎಂದು ಹೇಳಿದರು.
ಭಾಲ್ಕಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಈ ಉತ್ಸವದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಬೇಕು. ಅದ್ಧೂರಿ ಕಾರ್ಯಕ್ರಮವಾಗಲಿ’ ಎಂದು ಹೇಳಿದರು.
ಮಹೇಶ ಪಾಟೀಲ, ಚನ್ನಬಸವ ಬಳತೆ ಮಾತನಾಡಿದರು. ಬೇಲೂರ ಪಂಚಾಕ್ಷರಿ ಸ್ವಾಮೀಜಿ, ಬಸವತತ್ವ ಪ್ರಚಾರ ಸಂಸ್ಥೆಯ ಡಾ.ಬಸವರಾಜ ಪಂಡಿತ್, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ಡಾ.ಅಮರನಾಥ ಸೋಲಪುರೆ, ಶಂಕರೆಪ್ಪ ಪಾಟೀಲ, ದೇವಿಕಾ ನಾಗೂರೆ, ಸೂರ್ಯಕಾಂತ ಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.