ADVERTISEMENT

ಜುಲೈ 11 ರಂದು ಬೀದರ್ ಬಂದ್‍ಗೆ ನಿರ್ಧಾರ

ಬಸವಣ್ಣನವರ ಇತಿಹಾಸ ತಿರುಚಿದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 13:04 IST
Last Updated 25 ಜೂನ್ 2022, 13:04 IST
ಬಸವಣ್ಣನವರ ಇತಿಹಾಸ ತಿರುಚಲಾದ 9ನೇ ತರಗತಿಯ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕ ಹಿಂಪಡೆಯಲು ಒತ್ತಾಯಿಸಿ ಹೋರಾಟ ರೂಪಿಸಲು ಬೀದರ್‌ನಲ್ಲಿ ಬಸವ ಪರ ಹಾಗೂ ಕನ್ನಡ ಪರ ಸಂಘಟನೆಗಳ ಸಭೆ ನಡೆಯಿತು
ಬಸವಣ್ಣನವರ ಇತಿಹಾಸ ತಿರುಚಲಾದ 9ನೇ ತರಗತಿಯ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕ ಹಿಂಪಡೆಯಲು ಒತ್ತಾಯಿಸಿ ಹೋರಾಟ ರೂಪಿಸಲು ಬೀದರ್‌ನಲ್ಲಿ ಬಸವ ಪರ ಹಾಗೂ ಕನ್ನಡ ಪರ ಸಂಘಟನೆಗಳ ಸಭೆ ನಡೆಯಿತು   

ಬೀದರ್: ಬಸವಣ್ಣನವರ ಇತಿಹಾಸ ತಿರುಚಿದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ಹಿಂಪಡೆಯಲು ಆಗ್ರಹಿಸಿ ಬಸವ ಪರ ಹಾಗೂ ಕನ್ನಡ ಪರ ಸಂಘಟನೆಗಳು ಜುಲೈ 11 ರಂದು ಬೀದರ್ ಬಂದ್ ನಡೆಸಲು ನಿರ್ಧರಿಸಿವೆ.

ಇಲ್ಲಿಯ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಒಕ್ಕೋರಲಿಂದ ಈ ತೀರ್ಮಾನ ಕೈಗೊಳ್ಳಲಾಯಿತು.
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ನಡೆದಿದ್ದ ರ್‍ಯಾಲಿ ಮಾದರಿಯಲ್ಲೇ ಅಂದು ಜಿಲ್ಲೆಯ ಪ್ರತಿ ಗ್ರಾಮಗಳಿಂದಲೂ ಬಸವಾನುಯಾಯಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರನ್ನು ಕರೆಸಿ, ನಗರದಲ್ಲಿ ಬೃಹತ್ ರ್‍ಯಾಲಿಯನ್ನೂ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.

ಮಹಾ ಮಾನವತಾವಾದಿ ಬಸವಣ್ಣನವರು ಇಡೀ ಮನುಕುಲದ ಆಸ್ತಿ. ಪರಿಷ್ಕೃತ ಪಠ್ಯಪುಸ್ತಕ ವಾಪಸ್‍ಗೆ ಒತ್ತಾಯಿಸಿ ನಡೆಸಲಿರುವ ಹೋರಾಟ ಜಾತ್ಯತೀತ ಹಾಗೂ ರಾಜಕೀಯೇತರವಾಗಿದೆ. ಕಾರಣ, ರ್ಯಾಲಿಯಲ್ಲಿ ಸರ್ವ ಸಮುದಾಯಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಯಿತು.

ADVERTISEMENT

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, 9ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬಸವಣ್ಣನವರಿಗೆ ಅಪಚಾರ ಎಸಗಿರುವ ಬಗ್ಗೆ ವಿವಿಧ ಮಠಾಧೀಶರು ಸೇರಿ ಮುಖ್ಯಮಂತ್ರಿಯವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಲಾಗಿತ್ತು. ಅವರು ಆಗಿರುವ ತಪ್ಪುಗಳನ್ನು ಸರಿಪಡಿಸುವ ಭರವಸೆ ಕೊಟ್ಟಿದ್ದರು. ಆದರೆ, ಈವರೆಗೂ ಪಠ್ಯ ವಾಪಸ್ ಪಡೆದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬಳಿಗೆ ಶೀಘ್ರ ನಿಯೋಗ ಒಯ್ಯಲಾಗುವುದು. ಆಗಲೂ ಪ್ರಯೋಜನವಾಗದಿದ್ದರೆ, ತೀವ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ 12ನೇ ಶತಮಾನದ ಶರಣರ ವಿಚಾರಗಳನ್ನು ಅವಲೋಕಿಸಿ, ಬಸವಣ್ಣನವರ ಕುರಿತ ಪಾಠ ರಚಿಸಬೇಕು. ಬಸವಣ್ಣನವರು ಲಿಂಗಾಯತ ಧರ್ಮ ಕೊಟ್ಟರು ಎನ್ನುವ ಅಂಶವನ್ನು ಅದರಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಪರಿಷ್ಕೃತ ಪಠ್ಯಪುಸ್ತಕದಲ್ಲಿ ಉದ್ದೇಶಪೂರ್ವಕವಾಗಿಯೇ ಬಸವಣ್ಣನವರ ಇತಿಹಾಸ ತಿರುಚಲಾಗಿದೆ. ಅವರು ಮಾಡಿದ ಸಾಮಾಜಿಕ ಕ್ರಾಂತಿಯನ್ನು ಮರೆಮಾಚಿಸಲು ಪ್ರಯತ್ನಿಸಲಾಗಿದೆ. ಅವರ ವ್ಯಕ್ತಿತ್ವ ಕುಬ್ಜಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಪೀಳಿಗೆಗೆ ಬಸವಣ್ಣನವರ ಕುರಿತು ತಪ್ಪು ಸಂದೇಶ ರವಾನಿಸುವ ಪಠ್ಯಪುಸ್ತಕವನ್ನು ಹಿಂಪಡೆಯದಿದ್ದರೆ ಬೀದರ್‍ನಿಂದ ಬೆಂಗಳೂರುವರೆಗೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕೆ ಅಕ್ಕ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ಉಪಾಧ್ಯಕ್ಷ ಬಸವರಾಜ ಬುಳ್ಳಾ, ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ಗಾಂಧಿಗಂಜ್‍ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜಕುಮಾರ ಬಿರಾದಾರ ಗುನ್ನಳ್ಳಿ, ಸಂಗೊಳ್ಳಿ ರಾಯಣ್ಣ ಗೊಂಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ್ ಮಲ್ಕಾಪುರ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಮಾದಿಗ ದಂಡೋರ ಹೋರಾಟ ಸಮಿತಿಯ ಫನಾರ್ಂಡೀಸ್ ಹಿಪ್ಪಳಗಾಂವ್, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮುಖಂಡರಾದ ಚಂದ್ರಕಾಂತ ಶೆಟಕಾರ್, ಸೂರ್ಯಕಾಂತ ಶೆಟಕಾರ್, ಭರತ ಶೆಟಕಾರ್, ಜೈರಾಜ ಖಂಡ್ರೆ, ಬಸವರಾಜ ಪಾಟೀಲ ಹಾರೂರಗೇರಿ, ಧನರಾಜ ಹಂಗರಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.