ADVERTISEMENT

ಅಲ್ಲಿಯವರಿಲ್ಲಿ, ಇಲ್ಲಿಯವರಲ್ಲಿ: ಮತದಾರರು ಗೊಂದಲದಲ್ಲಿ

ಪಟ್ಟು ಬಿಡದ ಬಂಡಾಯ ಅಭ್ಯರ್ಥಿ: ಬಿಜೆಪಿ ಓಟಕ್ಕೆ ಬ್ರೆಕ್

ಚಂದ್ರಕಾಂತ ಮಸಾನಿ
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ಮಲ್ಲಿಕಾರ್ಜುನ ಖೂಬಾ
ಮಲ್ಲಿಕಾರ್ಜುನ ಖೂಬಾ   

ಬೀದರ್: ಬಸವಕಲ್ಯಾಣ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ನಂತರವೂ ಪಕ್ಷಗಳಲ್ಲಿನ ಗೊಂದಲ ಕಡಿಮೆಯಾಗಿಲ್ಲ. ಮುಖಂಡರ ಸ್ಥಾನ ಪಲ್ಲಟ ಮುಂದುವರಿದರೆ, ಬಂಡಾಯ ಅಭ್ಯರ್ಥಿಗಳು ಬಹಿರಂಗವಾಗಿ ಸೆಡ್ಡು ಹೊಡೆದು ಪಕ್ಷಗಳಿಗೆ ತಲೆ ನೋವಾಗಿದ್ದಾರೆ. ಮೂಲ ಪಕ್ಷ ಬಿಟ್ಟಿಲ್ಲ ಎಂದು ಹೇಳುವ ಮೂಲಕ ಮತದಾರರಲ್ಲೂ ಗೊಂದಲ ಸೃಷ್ಟಿಸಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪಕ್ಷದಿಂದ ಹೊರ ಬಂದಿಲ್ಲ. ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹೊರಗಿನವರು ಎನ್ನುವ ಜತೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನೇ ಮುಂದೆ ಮಾಡಿಕೊಂಡು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಮಲ್ಲಿಕಾರ್ಜುನ ಖೂಬಾ ಅವರು ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದರು. ನಾರಾಯಣರಾವ್‌ ಅಕಾಲಿಕ ನಿಧನದ ನಂತರ ಮತ್ತೆ ಕ್ಷೇತ್ರಕ್ಕೆ ಮರಳಿದ್ದಾರೆ. ಆದರೆ ಪಕ್ಷ ಟಿಕೆಟ್‌ ಕೊಡದ ಕಾರಣ ಬಂಡಾಯ ಎದ್ದಿದ್ದಾರೆ. ವಸತಿ ಸಚಿವ ಸೋಮಣ್ಣ ಅವರು ಮಲ್ಲಿಕಾರ್ಜುನ ಮನವೊಲಿಸಲು ನಡೆಸಿದ ಪ್ರಯತ್ನ ಯಶ ಕಂಡಿಲ್ಲ.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್‌ ಪಕ್ಷದಲ್ಲಿ ಇದ್ದೂ ಇಲ್ಲದ ಲೆಕ್ಕದಲ್ಲಿದ್ದಾರೆ. ಇವರ ಕಾರ್ಯ ವೈಖರಿ ಬೇಸರ ತರಿಸಿದೆ ಎಂದು ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಂಡಾಯಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಕಾರ್ಯಕರ್ತರು ಮನವಿ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ನೇರ ಸಂಪರ್ಕ ಮಾಡುವ ಮೂಲಕ ಖೂಬಾ ಮನವೊಲಿಸಲು ಪ್ರಯತ್ನಿಸಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

ಗೋರಟಾ ಸ್ಮಾರಕ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ನಿರ್ಲಕ್ಷ್ಯ ತೋರಿರುವ ಬಗ್ಗೆ ಬಸವಕಲ್ಯಾಣ ಸ್ವಾಭಿಮಾನಿ ಬಳಗಕ್ಕೆ ಅಸಮಾಧಾನವಿದೆ. ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿದಾಗಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಹೊರಗಿನ ವ್ಯಕ್ತಿಯನ್ನು ಬೆಂಬಲಿಸಲಾರೆವು ಎಂದು ಬಳಗದ ಪದಾಧಿಕಾರಿಗಳು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪಿ.ಜಿ.ಆರ್‌.ಸಿಂಧ್ಯ ಅವರನ್ನು ಬೆಂಬಲಿಸಿದ್ದ ಡಾ.ಪೃಥ್ವಿರಾಜ್‌ ಬಿರಾದಾರ ಇದೀಗ ಮಲ್ಲಿಕಾರ್ಜುನ ಖೂಬಾ ಬೆಂಬಲಕ್ಕೆ ನಿಂತು ಅಚ್ಚರಿ ಮೂಡಿಸಿದ್ದಾರೆ.

ಏಪ್ರಿಲ್ 3 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಅಂತಿಮ ಕಣದಲ್ಲಿ ಎಷ್ಟು ಜನ ಉಳಿಯಲಿದ್ದಾರೆ. ಯಾರು ಯಾರ ಬೆನ್ನಿಗೆ ನಿಲ್ಲಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.