ADVERTISEMENT

ಬೀದರ್‌: ಬಿಜೆಪಿ ಶಾಸಕ ಮಾಡಾಳ್ ಬಂಧನಕ್ಕೆ ಆಗ್ರಹ

ರಾಜ್ಯ ಬಿಜೆಪಿ ಸರ್ಕಾರ ವಜಾಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ; ರಾಜ್ಯಪಾಲರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 5:34 IST
Last Updated 5 ಮಾರ್ಚ್ 2023, 5:34 IST
ಬೀದರ್‌ನಲ್ಲಿ ಶನಿವಾರ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು
ಬೀದರ್‌ನಲ್ಲಿ ಶನಿವಾರ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು   

ಬೀದರ್‌: ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಮನೆ ಹಾಗೂ ಅವರ ಪುತ್ರನ ಕಚೇರಿಯಲ್ಲಿ ಒಟ್ಟು ₹ 8 ಕೋಟಿಗೂ ಅಧಿಕ ಲಂಚದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ಶಾಸಕರ ಮನೆಯಲ್ಲಿ ಲಂಚದ ಹಣ ಹಾಗೂ ಸಾಕಷ್ಟು ಚಿನ್ನ ದೊರೆತಿರುವುದು ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ತೋರಿಸಿದೆ. ಈ ಹಗರಣ ₹ 8 ಕೋಟಿಯದ್ದಷ್ಟೇ ಅಲ್ಲ; ₹ 800 ಕೋಟಿಯದ್ದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಹಗರಣದಲ್ಲಿ ಶಾಮೀಲಾಗಿರುವುದು ಕಂಡು ಬರುತ್ತದೆ ಎಂದು ದೂರಿದರು.

ADVERTISEMENT

ಇಂತಹ ಹಗರಣಗಳ ಮೂಲಕ ಲೆಕ್ಕವಿಲ್ಲದಷ್ಟು ಹಣ ದೋಚಿ ಮುಖ್ಯಮಂತ್ರಿಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಕಪ್ಪು ಕಾಣಿಕೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅವರನ್ನು ಕೂಡಲೇ ಬಂಧಿಸಬೇಕು. ನೂರಾರು ಹಗರಣಗಳನ್ನು ಮಾಡಿರುವ ಬಿಜೆಪಿ ಸರ್ಕಾರದ ಸಚಿವರು ಹಾಗೂ ಶಾಸಕರು ಭ್ರಷ್ಟಾಚಾರದ ಬಕಾಸುರರಾಗಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ನ್ಯಾಯ ಎತ್ತಿ ಹಿಡಿಯಲು ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಲಂಚದ ಹಗರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೀತಾ ಚಿದ್ರಿ, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಕಾರ್ಯದರ್ಶಿ ಪರ್ವೇಜ್ ಕಮಲ್, ಮುಖಂಡರಾದ ಬಸವರಾಜ ಬುಳ್ಳಾ, ಧನರಾಜ ತಾಳಂಪಳ್ಳಿ, ಶಶಿಕಾಂತ ಪೊಲೀಸ್ ಪಾಟೀಲ, ನೀಲಕಂಠ ರಾಠೋಡ್, ಚಂದ್ರಶೇಖರ ಚನಶೆಟ್ಟಿ, ಸಂಜಯ್ ಜಾಗೀರದಾರ್, ಚಂದ್ರಕಾಂತ ಹಿಪ್ಪಳಗಾಂವ್, ಶಂಕರ ರೆಡ್ಡಿ ಚಿಟ್ಟಾ, ಮಹಮ್ಮದ್ ಯುಸೂಫ್, ಡಿ.ಕೆ. ಸಂಜುಕುಮಾರ, ಅಜಮತ್ ಪಟೇಲ್, ಜಾನ್ ವೆಸ್ಲಿ, ಗೋವರ್ಧನ್ ರಾಠೋಡ್, ಶಾಕೀರ್ ಖಾನ್, ಸಚಿನ್ ಮಲ್ಕಾಪುರ, ನಯೀಮ್ ಕಿರ್ಮಾನಿ, ಪ್ರಶಾಂತ ದೊಡ್ಡಿ, ಮೋಹನ್ ಕಾಳೇಕರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.