ADVERTISEMENT

ಬಸವಕಲ್ಯಾಣ: ಕೊಹಿನೂರ ತಾಲ್ಲೂಕು ರಚನೆ ಬೇಡಿಕೆಗೆ ಮರುಜೀವ

ಮಾಣಿಕ ಆರ್ ಭುರೆ
Published 8 ಡಿಸೆಂಬರ್ 2024, 5:32 IST
Last Updated 8 ಡಿಸೆಂಬರ್ 2024, 5:32 IST
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಗ್ರಾಮ ಪಂಚಾಯಿತಿ ಕಟ್ಟಡ
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಗ್ರಾಮ ಪಂಚಾಯಿತಿ ಕಟ್ಟಡ   

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಕೊಹಿನೂರನ್ನು ತಾಲ್ಲೂಕು ಕೇಂದ್ರವನ್ನಾಗಿ‌‌ ಘೋಷಿಸಬೇಕು ಎಂಬ ಬೇಡಿಕೆ ಮರುಜೀವ ಪಡೆದಿದ್ದು, ತಾಲ್ಲೂಕು ರಚನೆ ಹೋರಾಟ ಸಮಿತಿಯಿಂದ‌ ಸಂಬಂಧಿತರಿಗೆ ಈಚೆಗೆ ಈ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ.

ಜಿಲ್ಲೆಯ ಚಿಟಗುಪ್ಪ, ಕಮಲನಗರ, ಹುಲಸೂರ ಈ‌ ಹೊಸ ತಾಲ್ಲೂಕುಗಳ ಘೋಷಣೆಯ ಪೂರ್ವದಿಂದಲೇ ಕೊಹಿನೂರ ತಾಲ್ಲೂಕಿಗಾಗಿಯೂ ಹೋರಾಟ ನಡೆಯುತ್ತಿದೆ. ಅನೇಕ‌ ಸಲ ಧರಣಿ, ರಸ್ತೆ ತಡೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಮತ್ತು ಸಚಿವರು ಒಳಗೊಂಡು ಸಂಬಂಧಿತರಿಗೆ ಹತ್ತಾರು ಬಾರಿ ಮನವಿಯೂ ಸಲ್ಲಿಕೆಯಾಗಿವೆ.

ಜಿಲ್ಲಾ ಕೇಂದ್ರ ಬೀದರ್‌ನಿಂದ ಕೊಹಿನೂರ 105 ಕಿ.ಮೀ ದೂರವಿದೆ. ಬಸವಕಲ್ಯಾಣದಿಂದ 40 ಕಿ.ಮೀ ಅಂತರದಲ್ಲಿದೆ. ಆದ್ದರಿಂದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಮೂರು ತಾಲ್ಲೂಕು ಕೇಂದ್ರಗಳಿಂದ 25 ಕಿ.ಮೀ ನಷ್ಟು ದೂರದಲ್ಲಿನ 104 ಗ್ರಾಮಗಳನ್ನು‌‌‌ ಇದಕ್ಕೆ ಸೇರಿಸಬಹುದಾಗಿದೆ.

ADVERTISEMENT

ಕೊಹಿನೂರ ಸುತ್ತಲಿನಲ್ಲಿ ಕೇವಲ 7 ಕಿ.ಮೀ ಅಂತರದೊಳಗೆ ಮಾಜಿ ಸಚಿವರುಗಳಾದ ಬಸವರಾಜ ಪಾಟೀಲ ಅಟ್ಟೂರ್ ಅವರ ಅಟ್ಟೂರ್ ಗ್ರಾಮ, ರೇವು ನಾಯಕ‌ ಬೆಳಮಗಿ ಅವರ ಬೆಳಮಗಿ ತಾಂಡಾ, ಸುಭಾಷ ಗುತ್ತೇದಾರ್ ಅವರ ತಡಕಲ್ ಮತ್ತು ಶಾಸಕ ಶರಣು ಸಲಗರ ಅವರ ಸಲಗರ ಗ್ರಾಮಗಳಿವೆ.

ಈ ಮುಖಂಡರುಗಳು ಮನಸ್ಸು ಮಾಡಿದರೆ ಈ ಸಮಸ್ಯೆ ಬಗೆಹರಿಯುವುದು‌‌ ಕಷ್ಟಸಾಧ್ಯವೇನಲ್ಲ. ಇವರಲ್ಲಿ ಕೆಲವರು ಈ ಬೇಡಿಕೆಗೆ ಬೆಂಬಲಿಸಿ ಹೇಳಿಕೆ ನೀಡಿದ್ದಾರಾದರೂ ಯಾರಿಂದಲೂ ತೀವ್ರ ಪ್ರಯತ್ನ ನಡೆದಿಲ್ಲ.

'ಕೊಹಿನೂರ ಸುತ್ತಲಿನ ಗ್ರಾಮಗಳಿಗೆ ಜಿಲ್ಲಾ ಕೇಂದ್ರ ಬೀದರ್ ಬಹುದೂರವಿದೆ. ಈ ಕಾರಣ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಕೆಲ ತಾಲ್ಲೂಕುಗಳನ್ನು ಸೇರ್ಪಡೆಗೊಳಿಸಿ ಬಸವಕಲ್ಯಾಣ ಜಿಲ್ಲಾ ಕೇಂದ್ರವೆಂದು ಘೋಷಿಸಬೇಕು ಎಂಬ ಬೇಡಿಕೆಯೂ ಬಹುದಿನದ್ದಾಗಿದೆ.‌ ಹೀಗಾಗಿ ಸರ್ಕಾರ ಜನರ ಆಗ್ರಹಕ್ಕೆ ಸ್ಪಂದಿಸಬೇಕು. ಕೊಹಿನೂರ ತಾಲ್ಲೂಕು ಮತ್ತು ಬಸವಕಲ್ಯಾಣ ಜಿಲ್ಲೆ ಘೋಷಿಸಬೇಕು' ಎಂದು ಕೊಹಿನೂರ ತಾಲ್ಲೂಕು‌ ರಚನೆ ಹೋರಾಟ ಸಮಿತಿ ಅಧ್ಯಕ್ಷ ಶಿವಶರಣಪ್ಪ ಸಂತಾಜಿ ಆಗ್ರಹಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಪ್ರಾಥಮಿಕ ಆರೋಗ್ಯ ಕೇಂದ್ರ
ಎಂ.ಪಿ.ಪ್ರಕಾಶ ನೇತೃತ್ವದ ತಾಲ್ಲೂಕು ಪುನರ್ ರಚನಾ ಸಮಿತಿಯೂ ಕೊಹಿನೂರ ‌ತಾಲ್ಲೂಕಿಗೆ ಶಿಫಾರಸು ‌ಮಾಡಿದೆ.‌ 25 ಕಿ.ಮೀ. ವ್ಯಾಪ್ತಿಯ ಗ್ರಾಮಗಳನ್ನು ಇದಕ್ಕೆ‌ ಸೇರಿಸಬಹುದಾಗಿದೆ.
ಶಿವಶರಣಪ್ಪ‌ ಸಂತಾಜಿ ಅಧ್ಯಕ್ಷ ತಾಲ್ಲೂಕು ರಚನೆ ಹೋರಾಟ ಸಮಿತಿ
ಗ್ರಾಮದಲ್ಲಿ 15 ಸಾವಿರ ಜನಸಂಖ್ಯೆ ಇದೆ. ನಾಡ ತಹಶೀಲ್ದಾರ್ ಕಚೇರಿ‌ ಒಳಗೊಂಡು ಎಲ್ಲ‌ ಅಗತ್ಯವಾದ ಕಚೇರಿಗಳಿವೆ. ಪೊಲೀಸ್ ಠಾಣೆ ಮಾತ್ರ ಬೇಕಾಗಿದೆ
ವೈಜನಾಥ ಪೂಜಾರಿ ಕಾರ್ಯದರ್ಶಿ ತಾಲ್ಲೂಕು ರಚನೆ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.