ADVERTISEMENT

ಚಿಟಗುಪ್ಪ: ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 2:10 IST
Last Updated 7 ನವೆಂಬರ್ 2020, 2:10 IST
ಚಿಟಗುಪ್ಪ ತಾಲ್ಲೂಕಿನ ಉಡಬಾಳ ವಾಡಿಯಿಂದ ಮುಸ್ತರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದ ಸೇತುವೆ ಮೇಲಿನ ರಸ್ತೆಯ ಮಣ್ಣು ಕುಸಿದಿರುವುದು
ಚಿಟಗುಪ್ಪ ತಾಲ್ಲೂಕಿನ ಉಡಬಾಳ ವಾಡಿಯಿಂದ ಮುಸ್ತರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದ ಸೇತುವೆ ಮೇಲಿನ ರಸ್ತೆಯ ಮಣ್ಣು ಕುಸಿದಿರುವುದು   

ಚಿಟಗುಪ್ಪ: ತಾಲ್ಲೂಕಿನ ಉಡಬಾಳ ವಾಡಿ ಗ್ರಾಮದಿಂದ ಮುಸ್ತರಿ ಗ್ರಾಮಕ್ಕೆ ಹೋಗುವ ರಸ್ತೆ ಮಧ್ಯದ ಸೇತುವೆ ಮೇಲಿನ ರಸ್ತೆಯ ಮಣ್ಣು ಕುಸಿದು ನೀರಿನಲ್ಲಿ ಕೊಚ್ಚಿಹೋಗಿದೆ.

ಕಳೆದ ಎರಡು ವರ್ಷಗಳಿಂದ ಸೇತುವೆ ಹಾಗೂ ರಸ್ತೆ ಹಾಳಾಗಿದ್ದು, ಇದುವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ಸೇತುವೆ ಮೇಲೆ ತಗ್ಗು ಉಂಟಾಗಿ ಎರಡು ವರ್ಷಗಳು ಕಳೆದಿವೆ. ವರ್ಷದ ಹಿಂದೆ ಸಂಬಂಧಪಟ್ಟವರ ಗಮನ ಸೆಳೆಯಲಾಗಿದೆ. ಆದರೂ, ಪ್ರಯೋಜನವಾಗಿಲ್ಲ ಎಂದು ಉಡಬಾಳ ವಾಡಿ ಗ್ರಾಮದ ದೇವಿಂದ್ರ ದೂರಿದ್ದಾರೆ.

ಮುಖ್ಯವಾಗಿ ರಸ್ತೆಯ ತಿರುವಿನಲ್ಲಿಯೇ ಸೇತುವೆ ಇದ್ದು, ಆಳವಾದ ತಗ್ಗು ಬಿದ್ದಿರುವುದರಿಂದ ವಾಹನಗಳು ಅಪಘಾತಕ್ಕಿಡಾಗುವು ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಹಲವು ಬಾರಿ ದ್ವಿಚಕ್ರ ಸವಾರರು ಬಿದ್ದು ಗಾಯಗಳಾದ ಘಟನೆಗಳು ನಡೆದಿವೆ ಎಂದು ಅವರು ಹೇಳಿದರು.

ADVERTISEMENT

‘ಎಂಜಿನಿಯರ್‌ಗಳು ಸರಿಯಾಗಿ ಕಾಮಗಾರಿಗಳ ಪರಿಶೀಲನೆ ಮಾಡುತ್ತಿಲ್ಲ. ಸೇತುವೆ ತಗ್ಗಿನಲ್ಲಿ ಅನೇಕರು ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ. ರಸ್ತೆ ಪಕ್ಕದ ತೆರೆದ ಬಾವಿಯೂ ಕುಸಿದಿದೆ. ಹೀಗಾಗಿ ರಸ್ತೆಯ ಮಣ್ಣು ಕ್ರಮೇಣ ನಿತ್ಯ ಕುಸಿಯುತ್ತಿರುವುದರಿಂದ ಅಪಾಯ ಹೆಚ್ಚಿದೆ’ ಎಂದು ಚಾಲಕ ಉಮೇಶ್ ಹೇಳಿದ್ದಾರೆ.

ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು, ಸಂಪೂರ್ಣವಾಗಿ ಸೇತುವೆ ದುರಸ್ತಿ ಕೈಗೊಂಡು, ಎತ್ತರ ಹೆಚ್ಚಿಸಿ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂಬುದ್ದು ಇಲ್ಲಿಯ ನಾಗರಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.