ಬೀದರ್: ಡೆಂಗಿ, ಚಿಕುನ್‌ಗುನ್ಯಾ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅದರ ಬಗ್ಗೆ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಆದರೆ, ಅವುಗಳೇ ಅದನ್ನು ಪಾಲಿಸುತ್ತಿಲ್ಲ!
ನಗರದ ನಗರಸಭೆ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ಅದರ ಸುತ್ತಮುತ್ತಲೂ ಇರುವ ಬಹುತೇಕ ಸರ್ಕಾರಿ ಕಚೇರಿಗಳ ಪರಿಸರದಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಇತರೆ ಸರ್ಕಾರಿ ಕಚೇರಿಗಳ ಪರಿಸ್ಥಿತಿಯೂ ಹೆಚ್ಚು ಕಮ್ಮಿ ಇದೇ ರೀತಿ ಇದೆ.
ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದೆ. ಲಾರ್ವಾ ಸಮೀಕ್ಷೆ ನಡೆಸುತ್ತಿದೆ. ಮಳೆ ನೀರು ನಿಲ್ಲದಂತೆ ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದೆ. ಆದರೆ, ಮಳೆ ಬಂದರೆ ಅದರ ಪರಿಸರದಲ್ಲೇ ನೀರು ನಿಲ್ಲುತ್ತಿದೆ. ಅದರ ತಾರಸಿ, ನೆಂಟಲ್ ಮೇಲೆ ನಿರುಪಯುಕ್ತ ವಸ್ತುಗಳನ್ನು ಬೇಕಾಬಿಟ್ಟಿ ಎಸೆದಿದ್ದು, ಅದರೊಳಗೆ ನೀರು ಸಂಗ್ರಹವಾಗುತ್ತಿದೆ. ಇನ್ನು, ಕಚೇರಿಯ ಮುಂಭಾಗದಲ್ಲೇ ತ್ಯಾಜ್ಯ ಬಿದ್ದರೂ ಅದನ್ನು ಸಮರ್ಪಕವಾಗಿ ವಿಲೇವಾರಿಗೊಳಿಸುತ್ತಿಲ್ಲ.
ಇಂತಹುದೇ ಪರಿಸ್ಥಿತಿ ನಗರಸಭೆಯ ಕಚೇರಿಯಲ್ಲೂ ಕಂಡು ಬಂತು. ನಗರಸಭೆಯ ಆವರಣದಲ್ಲಿ ಸಿಸಿ ರಸ್ತೆ ಮಾದರಿಯಲ್ಲಿ ಬೆಡ್ ಹಾಕಲಾಗಿದೆ. ಆದರೆ, ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಇದರ ಪರಿಣಾಮ ಅಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಲ್ಲುತ್ತಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಲಾರ್ವಾ ಬೆಳೆಯುತ್ತಿದೆ. ನಿತ್ಯ ಅದರ ಎದುರಿನಿಂದಲೇ ಅಧಿಕಾರಿಗಳು, ನಗರಸಭೆಯ ಸದಸ್ಯರು ಓಡಾಡುತ್ತಾರೆ. ಆದರೆ, ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆಯಿಂದ ವಿವಿಧ ಬಡಾವಣೆಗಳಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಆದರೆ, ಅದರ ಆವರಣದಲ್ಲೇ ನೀರು ನಿಂತು ಸೊಳ್ಳೆಗಳು ಹುಟ್ಟಿಕೊಳ್ಳುತ್ತಿದ್ದರೂ ಗಮನ ಹರಿಸಿಲ್ಲ. ಇದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
ನಗರಸಭೆಯ ಆವರಣದೊಳಗೆ ನಿಲ್ಲುವ ವಾಹನಗಳ ನಿಲುಗಡೆ ಸ್ಥಳ, ಅದರ ಹಿಂಬದಿ, ಜಿಲ್ಲಾಧಿಕಾರಿ ಕಚೇರಿ ಹಿಂಬದಿ, ಅದರ ಸುತ್ತಮುತ್ತಲಿನ ಭಾಗಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ. ಇದರಿಂದಲೇ ಸೊಳ್ಳೆಗಳು ಹುಟ್ಟಿಕೊಳ್ಳುತ್ತಿವೆ. ಇದನ್ನು ಮೊದಲು ಸರಿಪಡಿಸುವ ಕೆಲಸವಾಗಬೇಕು ಎಂದು ಜನ ಆಗ್ರಹಿಸಿದ್ದಾರೆ.
ಈ ಸಂಬಂಧ ನಗರಸಭೆಯ ಪೌರಾಯುಕ್ತ ಶಿವರಾಜ ರಾಠೋಡ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಸರ್ಕಾರಿ ಕಚೇರಿಗಳಷ್ಟೇ ಅಲ್ಲ ವ್ಯಾಪಾರಿಗಳು ಕೂಡ ಸ್ವಚ್ಛತೆ ಕಡೆಗೆ ಲಕ್ಷ್ಯ ವಹಿಸಬೇಕು.ವಿಜಯಕುಮಾರ ಸೋನಾರೆ ಸಾಮಾಜಿಕ ಹೋರಾಟಗಾರ
ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಒಬ್ಬರಿಂದ ಏನೂ ಆಗುವುದಿಲ್ಲ.ಸುನೀಲ ಭಾವಿಕಟ್ಟಿ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.