ADVERTISEMENT

ಶ್ರೇಷ್ಠನಾಗಲು ಬೇಕು ಮಾನವೀಯ ಮೌಲ್ಯ

ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಸಾಹಿತಿ ಯಾಳವಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 14:01 IST
Last Updated 22 ಮಾರ್ಚ್ 2019, 14:01 IST
ಬೀದರ್‌ನ ಕೃಷ್ಣ ರಿಜೆನ್ಸಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ‘ಅಪರೂಪದ ಸಾಹಿತಿ ಎಂ.ಜಿ. ದೇಶಪಾಂಡೆ’ ಕೃತಿಯನ್ನು ಹುಲಸೂರಿನ ಶಿವಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು. ಶ್ರೀದೇವಿ ಹೂಗಾರ, ಎಂ.ಜಿ. ದೇಶಪಾಂಡೆ, ಡಾ. ಗವಿಸಿದ್ದಪ್ಪ ಪಾಟೀಲ, ಸೋಮನಾಥ ಯಾಳವಾರ, ಜಗನ್ನಾಥ ಮಹಾರಾಜ, ಡಾ. ಜಗನ್ನಾಥ ಹೆಬ್ಬಾಳೆ, ಚಂದ್ರಪ್ಪ ಹೆಬ್ಬಾಳಕರ್, ಸುರೇಶ ಚನಶೆಟ್ಟಿ ಇದ್ದರು
ಬೀದರ್‌ನ ಕೃಷ್ಣ ರಿಜೆನ್ಸಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ‘ಅಪರೂಪದ ಸಾಹಿತಿ ಎಂ.ಜಿ. ದೇಶಪಾಂಡೆ’ ಕೃತಿಯನ್ನು ಹುಲಸೂರಿನ ಶಿವಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು. ಶ್ರೀದೇವಿ ಹೂಗಾರ, ಎಂ.ಜಿ. ದೇಶಪಾಂಡೆ, ಡಾ. ಗವಿಸಿದ್ದಪ್ಪ ಪಾಟೀಲ, ಸೋಮನಾಥ ಯಾಳವಾರ, ಜಗನ್ನಾಥ ಮಹಾರಾಜ, ಡಾ. ಜಗನ್ನಾಥ ಹೆಬ್ಬಾಳೆ, ಚಂದ್ರಪ್ಪ ಹೆಬ್ಬಾಳಕರ್, ಸುರೇಶ ಚನಶೆಟ್ಟಿ ಇದ್ದರು   

ಬೀದರ್: ‘ಮಾನವೀಯ ಮೌಲ್ಯಗಳಿಂದ ಮಾತ್ರ ವ್ಯಕ್ತಿ ಶ್ರೇಷ್ಠನಾಗಲು ಸಾಧ್ಯ’ ಎಂದು ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ಅಭಿಪ್ರಾಯಪಟ್ಟರು.

ಸಾಹಿತಿ ಎಂ.ಜಿ. ದೇಶಪಾಂಡೆ ಅವರ 68ನೇ ಜನ್ಮದಿನದ ಪ್ರಯುಕ್ತ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ನಗರದ ಕೃಷ್ಣ ರಿಜೆನ್ಸಿಯಲ್ಲಿ ಆಯೋಜಿಸಿದ್ದ 68 ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದ.ರಾ. ಬೇಂದ್ರೆ, ಗಳಗನಾಥರು ಬಡತನದಲ್ಲೂ ಬೇರೆಯವರ ಬಗ್ಗೆ ಚಿಂತನೆ ಮಾಡಿದ ಉದಾಹರಣೆಗಳು ಇವೆ. ಕಷ್ಟದ ಪರಿಸ್ಥಿತಿಯಲ್ಲಿ ಇತರರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು’ ಎಂದು ಹೇಳಿದರು.

ADVERTISEMENT

‘ಉದಾರತೆ ಇದ್ದವರು ನಿಜವಾದ ಸಾಹಿತಿಗಳು. ತಮ್ಮ ಬದುಕಿನಲ್ಲಿ ಇನ್ನೊಬ್ಬರ ಬಗ್ಗೆ ಚಿಂತನೆ ಮಾಡುವುದು, ತ್ಯಾಗಿಗಳಾಗಿ ಬಾಳುವುದು ನೈಜ ಬದುಕು’ ಎಂದು ತಿಳಿಸಿದರು.

‘ಎಂ.ಜಿ. ದೇಶಪಾಂಡೆ ಅವರು ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ದೇಶಪಾಂಡೆ ಅವರು ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಕೃತಿಗಳು ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಬೇಕು’ ಎಂದು ಅಧ್ಯಕ್ಷತೆ ವಹಿಸಿದ್ದ ಡಾ. ಗವಿಸಿದ್ದಪ್ಪ ಪಾಟೀಲ ತಿಳಿಸಿದರು.
‘ಲೇಖನಿ ಹಾಗೂ ಖಡ್ಗಕ್ಕೆ ಇರುವ ಬೆಲೆ ಯಾವುದಕ್ಕೂ ಇಲ್ಲ’ ಎಂದು ಸಾನಿಧ್ಯ ವಹಿಸಿದ್ದ ಹುಲಸೂರಿನ ಶಿವಾನಂದ ಸ್ವಾಮೀಜಿ ಹೇಳಿದರು.

ಸಾಹಿತಿಗಳಾದ ಚಂದ್ರಪ್ಪ ಹೆಬ್ಬಾಳಕರ್‌, ಮಾಣಿಕರಾವ್ ಬಿರಾದಾರ, ಜಗನ್ನಾಥ ಮಹಾರಾಜ, ಶ್ರೀದೇವಿ ಹೂಗಾರ ಮಾತನಾಡಿದರು.

68 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಸವರಾಜ ದಯಾಸಾಗರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಓಂಕಾರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.