ADVERTISEMENT

ಬೀದರ್‌: ಪ್ರತಿದಿನ 43 ಸಾವಿರ ಲೀಟರ್‌ ಹಾಲು ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:47 IST
Last Updated 26 ನವೆಂಬರ್ 2025, 5:47 IST
ಹಾಲು ಕರಿಯುತ್ತಿರುವ ರೈತ
ಹಾಲು ಕರಿಯುತ್ತಿರುವ ರೈತ   

ಬೀದರ್‌: ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟದ ಜಿಲ್ಲೆಗಳಲ್ಲಿ ಸದ್ಯ ಬೀದರ್‌ ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಹಾಲು ಉತ್ಪಾದಿಸಲಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದ ಉತ್ಪಾದನೆಗೆ ವಿಪುಲ ಅವಕಾಶಗಳಿವೆ.

ಬೀದರ್‌ ಜಿಲ್ಲೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಹೆಚ್ಚಿನವರು ಈಗಲೂ ಸಾಂಪ್ರದಾಯಿಕವಾಗಿಯೇ ಹಾಲು ಉತ್ಪಾದಿಸುತ್ತಾರೆ. ಒಂದುವೇಳೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಕಲಬುರಗಿ–ಬೀದರ್‌–ಯಾದಗಿರಿ ಹಾಲು ಒಕ್ಕೂಟದಿಂದ ಸದ್ಯ ಪ್ರತಿದಿನ ಸುಮಾರು 85 ಸಾವಿರ ಲೀಟರ್‌ ಹಾಲು ಉತ್ಪಾದಿಸಲಾಗುತ್ತಿದೆ. ಇದರಲ್ಲಿ 43 ಸಾವಿರ ಲೀಟರ್‌ ಬೀದರ್‌ ಜಿಲ್ಲೆಯೊಂದರ ಪಾಲಿದೆ.

ADVERTISEMENT


ಉತ್ಪಾದನೆ ಹೆಚ್ಚಿಸಲು ಏನಿದೆ ದಾರಿ?

ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದು, ಹೆಚ್ಚಿನವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಜಗತ್ತಿನಲ್ಲೇ ಹೆಚ್ಚಿನ ಹಾಲು ಉತ್ಪಾದಿಸುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಆದರೆ, ಜಾನುವಾರುಗಳ ತಲಾ ಹಾಲಿನ ಉತ್ಪಾದನೆ ನೋಡಿದರೆ ಅನ್ಯ ರಾಷ್ಟ್ರಗಳಿಗಿಂತ ಭಾರತ ಬಹಳ ಹಿಂದಿದೆ. ಪಶುಪಾಲನೆ ಕುಟುಂಬದ ಒಂದು ಭಾಗವಾಗಿದೆಯೇ ಹೊರತು ಅದನ್ನು ಉದ್ಯಮ, ಹಣ ಗಳಿಸುವ ಮಾರ್ಗ ಎಂದು ಹೆಚ್ಚಿನವರು ಪರಿಗಣಿಸದೇ ಇರುವುದು ಮುಖ್ಯ ಕಾರಣದೆ.

ಉತ್ತಮ ಹೈನು ತಳಿಗಳ ಆಯ್ಕೆ, ವೈಜ್ಞಾನಿಕ ನಿರ್ವಹಣೆ, ಸಮತೋಲಿತ ಆಹಾರ ಪೂರೈಕೆ, ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ವ್ಯವಸ್ಥೆ, ಮಾರುಕಟ್ಟೆ ಸೌಲಭ್ಯ ಮಹತ್ತರ ಪಾತ್ರ ವಹಿಸುತ್ತವೆ ಎನ್ನುತ್ತಾರೆ ದೇವಣಿ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರದ ಮುಖ್ಯಸ್ಥ ಪ್ರಕಾಶಕುಮಾರ ರಾಠೋಡ್‌.

ಜಾನುವಾರುಗಳ ದೇಹಕ್ಕೆ ಅನುಗುಣವಾಗಿ ಸಾಂದ್ರೀಕೃತ ಮತ್ತು ಖನಿಜ ಮಿಶ್ರಿತ ಆಹಾರ ನೀಡುವುದು, ನಿಯಮಿತವಾಗಿ ಚುಚ್ಚುಮದ್ದು ಮತ್ತು ಜಂತುನಾಶಕಗಳನ್ನು ನೀಡುವುದು, ಸಮಯಕ್ಕೆ ಸರಿಯಾಗಿ ಬೆದೆ ಪತ್ತೆ, ಸಂತಾನೋತ್ಪತ್ತಿ ಮತ್ತು ಗರ್ಭಧಾರಣೆಯ ಪರೀಕ್ಷೆಯನ್ನು ಅನುಸರಿಸುವುದು ಬಹಳ ಅಗತ್ಯ. ರೈತರು ಹಸು ಮತ್ತು ಎಮ್ಮೆಗಳಲ್ಲಿ ನಿಗದಿತ ಪ್ರಮಾಣದ ಕೊಬ್ಬು ಮತ್ತು ಕೊಬ್ಬಿಲ್ಲದ ಘನಾಂಶ ಪಡೆಯುವುದರಿಂದ ಹೆಚ್ಚಿನ ಆದಾಯ ಹಾಗೂ ಒಳ್ಳೆಯ ಆರೋಗ್ಯ ಹೊಂದಬಹುದು ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಗ್ರಾಹಕರಿಂದ ತಂತ್ರಜ್ಞಾನ ಬೆಂಬಲಿತ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಹಾಲು ಮತ್ತು ಹಾಲು ಆಧಾರಿತ ಉತ್ಪನ್ನಗಳಿಗೆ ಡಿಜಿಟಲ್ ಮಾರಾಟದ ಅವಕಾಶವಿದೆ. ಶುದ್ಧ ಹಾಲು ಉತ್ಪಾದನಾ ವಿಧಾನಗಳನ್ನು ಅನುಸರಿಸುವುದು ಅತ್ಯಗತ್ಯ. ಇದರೊಂದಿಗೆ ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳಾದ ಬೆಣ್ಣೆ, ಮಜ್ಜಿಗೆ, ಮೊಸರು, ಚೀಸ್, ಐಸ್ ಕ್ರೀಮ್, ಖೋವಾ, ರಾಬ್ರಿ, ಕುಲ್ಫಿ, ಶ್ರೀಖಂಡ್, ಪನೀರ್, ಚನ್ನಾ, ತುಪ್ಪ, ಲಸ್ಸಿ, ಬರ್ಫಿ, ಪೇಡಾ, ಗುಲಾಬ್‌ ಜಾಮೂನ್, ಕಲಾಕಂದ್‌ ಇತ್ಯಾದಿಗಳಿಗೆ ಹಾಲಿಗಿಂತ ಹೆಚ್ಚಿನ ಬೆಲೆಯಿದೆ. ಈ ಉತ್ಪನ್ನಗಳಿಂದ ಹೆಚ್ಚಿನ ಆದಾಯಗಳನ್ನು ಕೂಡ ಪಡೆಯಬಹುದು. ರೈತರು ಇದರ ಕಡೆಯೂ ಗಮನ ಹರಿಸಬೇಕಿದೆ ಎಂದು ಸಲಹೆ ಮಾಡಿದ್ದಾರೆ.

ಪ್ರಕಾಶ ರಾಠೋಡ್‌

ಹಸಿರು ಮೇವಿನ ಉತ್ಪಾದನೆ ಮಿಶ್ರತಳಿ ಪಾಲನೆ ಮತ್ತು ಹೆಚ್ಚಿನ ನಿರ್ವಹಣಾ ಪದ್ದತಿಗಳನ್ನು ಅಳವಡಿಸಿಕೊಂಡರೆ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಾಗುತ್ತದೆ. –ಪ್ರಕಾಶಕುಮಾರ ರಾಠೋಡ್‌ ಮುಖ್ಯಸ್ಥ ದೇವಣಿ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ

ಇಂದೇಕೆ ರಾಷ್ಟ್ರೀಯ ಹಾಲು ದಿನ? ಪ್ರತಿ ವರ್ಷ ನವೆಂಬರ್‌ 26ರಂದು ರಾಷ್ಟ್ರೀಯ ಹಾಲು ದಿನವಾಗಿ ಆಚರಿಸಲಾಗುತ್ತದೆ. ಶ್ವೇತ ಕ್ರಾಂತಿಯ ಹರಿಕಾರ ‘ಮಿಲ್ಕ್‌ಮ್ಯಾನ್‌ ಆಫ್‌ ಇಂಡಿಯಾ’ ಎಂದೇ ಖ್ಯಾತಿ ಹೊಂದಿದ ಡಾ. ವರ್ಗೀಸ್‌ ಕುರಿಯನ್‌ ಅವರು ನ. 26ರಂದು ಜನಿಸಿದ ದಿನ. ಅವರ ಜನ್ಮದಿನದಂದು ಹಾಲು ದಿನ ಆಚರಿಸಲಾಗುತ್ತದೆ. ಭಾರತವು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿಸಲು ಶ್ರಮಿಸಿದ ಕುರಿಯನ್‌ ಅವರ ಸವಿನೆನಪಿನಲ್ಲಿ ಈ ದಿನ ಆಚರಿಸಲಾಗುತ್ತದೆ. ಜೊತೆಗೆ ಇಡೀ ಹಾಲು ಉತ್ಪಾದಿಸುವವರಿಗೆ ಕೃತಜ್ಞತೆ ಸಲ್ಲಿಸುವ ದಿನವೂ ಹೌದು.

ಏನೇನು ಪ್ರಯೋಜನ? ಹಾಲನ್ನು ‘ಸಂಪೂರ್ಣ ಆಹಾರ’ ಎಂದು ಕರೆಯಲಾಗುತ್ತದೆ. ಮನುಷ್ಯನ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಕ್ಯಾಲ್ಷಿಯಂ ವಿಟಮಿನ್ D B12 ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಅಗತ್ಯ. ಹಾಲು ಮತ್ತು ಹಾಲು ಉತ್ಪನ್ನಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದೆ. ರೈತರ ಆರ್ಥಿಕತೆ ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯಕ್ಕೆ ಹೈನು ಕ್ಷೇತ್ರದ ಕೊಡುಗೆ ದೊಡ್ಡದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.