
ಬೀದರ್: ಆಗಷ್ಟೇ ಸೂರ್ಯನ ಕಿರಣಗಳು ಭೂಮಿ ಮೇಲೆ ಚಿಮ್ಮುತ್ತಿದ್ದವು. ಜನ ಬಿಳಿ ವಸ್ತ್ರ ತೊಟ್ಟು, ಹಣೆಯ ಮೇಲೆ ವಿಭೂತಿ, ಕುಂಕುಮ, ಗಂಧ ಹಚ್ಚಿಕೊಂಡು, ಶಿವನಾಮ ಸ್ಮರಣೆ ಮಾಡುತ್ತ ದೇವಸ್ಥಾನಗಳತ್ತ ಹೆಜ್ಜೆ ಹಾಕಿದರು. ದೇಗುಲಗಳಲ್ಲಿ ಎಲ್ಲೆಡೆ ಭಕ್ತಿಯ ವಾತಾವರಣ..
ಮಹಾ ಶಿವರಾತ್ರಿ ಅಂಗವಾಗಿ ನಗರದಲ್ಲಿ ಭಾನುವಾರ ಕಂಡ ಬಂದ ದೃಶ್ಯಗಳಿವು. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯನ್ನು ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಗರದ ಪಾಪನಾಶ ಶಿವಲಿಂಗ ದೇವಸ್ಥಾನದಲ್ಲಂತೂ ಇಡೀ ದಿನ ಸಡಗರ, ಸಂಭ್ರಮದ ಜಾತ್ರೆಯ ವಾತಾವರಣ ಇತ್ತು. ಬೆಳಿಗ್ಗೆಯಿಂದ ರಾತ್ರಿ ತನಕ ಜನ ದೇಗುಲಕ್ಕೆ ಭೇಟಿ ಕೊಟ್ಟು, ದೇವರ ದರ್ಶನ ಪಡೆದರು.
ಬೆಳಿಗ್ಗೆ ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದರು. ಬಳಿಕ ನಗರ ಸೇರಿದಂತೆ ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಸರತಿ, ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇಗುಲದ ಪ್ರಾಂಗಣದಲ್ಲಿ ಹೂ, ಕಾಯಿ, ಕರ್ಪೂರ, ವಿಭೂತಿ, ರುದ್ರಾಕ್ಷಿ ಖರೀದಿಸಿದರು. ಬೆಂಡು, ಬತ್ತಾಸು, ಬಲೂನ್, ಬಳೆ ಸೇರಿದಂತೆ ಇತರೆ ಆಟೊಗಳನ್ನು ಮಾರಾಟಕ್ಕಾಗಿ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದವು.
ಭಕ್ತರಿಗೆ ದೇಗುಲದ ಪ್ರಾಂಗಣದಲ್ಲಿ ಹಣ್ಣು, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸರು ದಿನವಿಡೀ ಹೆಣಗಾಡಿದರು.
‘ಫ್ರೆಂಡ್ಸ್’ ಅಸೋಸಿಯೇಷನ್‌ನವರು ಭಕ್ತರಿಗೆ ಹಣ್ಣುಗಳನ್ನು ವಿತರಿಸಿದರು. ದೇವರ ದರ್ಶನ ಪಡೆದ ಬಳಿಕ ಭಕ್ತರು ಪಾಪನಾಶ ಕೆರೆಯ ಪರಿಸರದಲ್ಲಿ ಕುಟುಂಬ ಸದಸ್ಯರೊಂದಿಗೆ ಓಡಾಡಿ ಕಾಲ ಕಳೆದರು. ಸಂಜೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ದಿನವಿಡೀ ಜಾತ್ರೆಯ ವಾತಾವರಣ ಇತ್ತು.
ಇನ್ನು, ನಗರದ ಬಸವ ಮಂಟಪದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದಿಂದ ಸಾಮೂಹಿಕ ಇಷ್ಟಲಿಂಗ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮಾತೆ ಸತ್ಯಾದೇವಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕನವರು ಇಷ್ಟಲಿಂಗ ಪೂಜೆ ನಡೆಸಿಕೊಟ್ಟರು. ಬಸವ ಕೇಂದ್ರ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, ಶಿವನಾಮ ಸ್ಮರಣೆ ಮಾಡಲಾಯಿತು.
ಇನ್ನು, ಆಯಾ ಬಡಾವಣೆಗಳಲ್ಲಿರುವ ಹನುಮ, ಭವಾನಿ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಾಗರಣೆ ಕಾರ್ಯಕ್ರಮ ನಡೆದವು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೆಂಗಳೂರಿನಿಂದ ನಗರಕ್ಕೆ ಬಂದು ನೇರ ಪಾಪನಾಶಿನಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಅಭಿಷೇಕ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಬಳಿಕ ಭಕ್ತರಿಗೆ ಹಣ್ಣುಗಳನ್ನು ವಿತರಿಸಿ ಶುಭ ಕೋರಿದರು. ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.