ADVERTISEMENT

‘ಒಂದು ದೇಶ, ಒಂದು ಚುನಾವಣೆ’ ವಿರೋಧಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:50 IST
Last Updated 26 ಸೆಪ್ಟೆಂಬರ್ 2024, 15:50 IST
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದವರು ಬೀದರ್‌ನಲ್ಲಿ ಗುರುವಾರ ಧರಣಿ ನಡೆಸಿದರು
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದವರು ಬೀದರ್‌ನಲ್ಲಿ ಗುರುವಾರ ಧರಣಿ ನಡೆಸಿದರು   

ಬೀದರ್‌: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಒಂದು ದೇಶ, ಒಂದು ಚುನಾವಣೆ’ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಧರಣಿ ನಡೆಸಿದರು.

ಬಳಿಕ ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಒಂದು ದೇಶ, ಒಂದು ಚುನಾವಣೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಇದನ್ನು ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಆಡಳಿತರೂಢ ಬಿಜೆಪಿಯ ಗುಪ್ತ ಅಜೆಂಡಾದಲ್ಲಿ ಒಂದು ದೇಶ ಒಂದು ಚುನಾವಣೆ ಕೂಡ ಸೇರಿದೆ. ಇದಕ್ಕೆ ಸಂಸತ್‌ ಒಳಗೆ ಹಾಗೂ ಹೊರಗೆ ವಿರೋಧ ವ್ಯಕ್ತವಾಗಿದೆ. ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಸಾಮರ್ಥ್ಯ ಚುನಾವಣಾ ಆಯೋಗವು ಹೊಂದಿಲ್ಲ. ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಇದರ ಜತೆಗೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಇವೆಲ್ಲವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಜನರಲ್ಲಿ ಗೊಂದಲ ಹುಟ್ಟು ಹಾಕಿ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಗಾಯಕವಾಡ್‌, ಜಿಲ್ಲಾ ಸಂಚಾಲಕರಾದ ಅರುಣ ಪಟೇಲ್, ರಾಜಕುಮಾರ ವಾಘಮಾರೆ, ಪ್ರಮುಖರಾದ ರಮೇಶ ಬೆಲ್ದಾರ, ಶಿವರಾಜ ತಡಪಳ್ಳಿ, ಸತೀಶ ರತ್ನಾಕರ್, ಶಿರೋಮಣಿ ಹಲಗೆ, ಬಸವರಾಜ ಭಾವಿದೊಡ್ಡಿ, ರಾಹುಲ್‌ ಹಾಲಹಿಪ್ಪರ್ಗಾ, ಶಿವಕುಮಾರ ಗುನ್ನಳ್ಳಿ, ಗೌತಮ್‌ ಮುತ್ತಂಗಿಕರ್, ಜೈಭೀಮ ಚಿಮ್ಮನಾಯಕ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.