ADVERTISEMENT

ಹುಲಸೂರ | ಧರ್ಮ–ಧನ ಎರಡೂ ಅಗತ್ಯ: ರಂಭಾಪುರಿ ಶ್ರೀ

relig

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:48 IST
Last Updated 20 ಜನವರಿ 2026, 4:48 IST
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಹಿರೇಮಠದಲ್ಲಿ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಹಿರೇಮಠದಲ್ಲಿ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು   

ಹುಲಸೂರ: ಮಾನವನು ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಧರ್ಮವನ್ನು ಕಾಪಾಡಿಕೊಳ್ಳಬೇಕು. ಸುಖಮಯ ಜೀವನಕ್ಕೆ ಧರ್ಮದಷ್ಟೇ ಧನವೂ ಅಗತ್ಯವಾಗಿದ್ದು, ಇವೆರಡನ್ನೂ ಸಮತೋಲನದಿಂದ ಸಂಪಾದಿಸಿಕೊಂಡು ಬಾಳುವುದೇ ಮನುಷ್ಯ ಜೀವನದ ಪರಮ ಗುರಿಯಾಗಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸೋಮವಾರ ಮೇಹಕರ ಹಿರೇಮಠದಲ್ಲಿ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನದಿಗೆ ನೀರನ್ನು ಎಷ್ಟು ತುಂಬಿದರೂ ಅದು ಖಾಲಿಯಾಗದೆ ಇರುವಂತೆ, ಧರ್ಮದ ಅರಿವು ಎಷ್ಟು ಹೆಚ್ಚಾದರೂ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದ ಅವರು, ಆತ್ಮಜ್ಞಾನ ವಿಕಾಸಕ್ಕೆ ಮತ್ತು ಅರಿವು ಜಾಗೃತಗೊಳ್ಳಲು ಶ್ರೀಗುರುವಿನ ಮಾರ್ಗದರ್ಶನ ಅನಿವಾರ್ಯ ಎಂದರು. ಜೀವನವು ನಾನಾ ಕಷ್ಟಗಳ ಸರಮಾಲೆಯಾಗಿದ್ದು, ಅರಿತು ನಡೆದರೆ ಬದುಕು ಹಸನಾಗುತ್ತದೆ; ಮರೆತು ನಡೆದರೆ ಜೀವನ ಬಂಧನಕಾರಿಯಾಗುತ್ತದೆ ಎಂದು ಶ್ರೀ ರೇಣುಕಾಚಾರ್ಯರ ವಚನವನ್ನು ಸ್ಮರಿಸಿದರು.

ADVERTISEMENT

ಬೆಳೆಯುತ್ತಿರುವ ಯುವಜನಾಂಗಕ್ಕೆ ಯೋಗ್ಯ ಅರಿವು ಹಾಗೂ ಸಂಸ್ಕಾರ ನೀಡಿದರೆ ಅವರು ದೇಶಕ್ಕೆ ಮಹತ್ವದ ಆಸ್ತಿಯಾಗಬಲ್ಲರು. ಶಿಕ್ಷಣದಿಂದ ಬುದ್ಧಿಶಕ್ತಿ ವಿಕಾಸಗೊಳ್ಳುತ್ತದೆ; ಧರ್ಮದಿಂದ ಭಾವನೆಗಳ ವಿಕಾಸ ಸಾಧ್ಯವಾಗುತ್ತದೆ. ಬದುಕಿಗೆ ಬುದ್ಧಿ ಮತ್ತು ಭಾವನೆಗಳು ಎರಡೂ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬಯಕೆ ಇಲ್ಲದ ಬದುಕು ಬದುಕೇ ಅಲ್ಲ; ಆದರೆ ಬಯಕೆಗಳು ಅತಿಯಾಗಬಾರದು. ಅಪೇಕ್ಷೆಗಳು ಸಮುದಾಯದ ಹಿತಕ್ಕೆ ಪೂರಕವಾಗಬೇಕು. ನಂಬಿಕೆಯಿಂದಲೇ ಜಗತ್ತು ನಿಂತಿದ್ದು, ನಂಬಿಕೆ ಕಳೆದುಕೊಂಡರೆ ಸಂಬಂಧಗಳು ಉಳಿಯಲಾರವು. ಪ್ರಾಚೀನ ಸಂಸ್ಕೃತಿಗಳು ಮತ್ತು ಪರಂಪರೆಗಳು ಮಾನವ ಜೀವನದ ಉಜ್ವಲ ಭವಿಷ್ಯಕ್ಕೆ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಇದಕ್ಕೂ ಮುನ್ನ ರಂಭಾಪುರಿ ಸ್ವಾಮೀಜಿ ಇಷ್ಟಲಿಂಗ ಮಹಾಪೂಜೆಯನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ಸಮಾರಂಭಕ್ಕೆ ಆಗಮಿಸಿದ್ದ ಸಕಲ ಸದ್ಭಕ್ತರಿಗೆ ಅನ್ನದಾಸೋಹ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.