ಭಾಲ್ಕಿ: ತಾಲ್ಲೂಕಿನ ಅಹಮದಾಬಾದ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೋಣೆ ಶಿಥಿಲಗೊಂಡಿದ್ದು, ಮಕ್ಕಳ ಜೀವ ಅಪಾಯದಲ್ಲಿದ್ದು, ಶಿಥಿಲಗೊಂಡ ಕೋಣೆ ನೆಲಸಮಗೊಳಿಸಿ, ನೂತನ ಕೋಣೆ ನಿರ್ಮಿಸಬೇಕು ಎಂದು ಕೋನಮೇಳಕುಂದಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರುಬಾಯಿ ಸಂತಪೂರೆ, ಭಾರತೀಯ ಜೈಭೀಮ ದಳದ ಅಧ್ಯಕ್ಷ ಮನೋಹರ ಸಂತಪೂರೆ ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರ ತಹಶೀಲ್ದಾರ್‌ಗೆ ಸಲ್ಲಿಸಿದರು.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಳೆಯದಾಗಿದ್ದು, ಯಾವ ಸಮಯದಲ್ಲಿ ಕುಸಿಯುತ್ತದೋ ಎನ್ನುವ ಭಯ ಎಲ್ಲರನ್ನೂ ಕಾಡುತ್ತಿದೆ. ಭಯದ ವಾತಾವರಣದಲ್ಲಿಯೇ ನಿತ್ಯ ಶಿಕ್ಷಕರು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಶಾಲೆಯ ಒಟ್ಟು ನಾಲ್ಕು ಕೋಣೆಗಳಲ್ಲಿ ಒಂದು ಕೋಣೆ ಸಂಪೂರ್ಣ ಶಿಥಿಲಗೊಂಡಿದೆ. ಉಳಿದ ಮೂರು ಕೋಣೆಗಳು ಮಳೆಗೆ ಸೋರುತ್ತವೆ. ಒಂದು ಕೋಣೆ ನೆಲಸಮಗೊಳಿಸಿ, ಉಳಿದವುಗಳನ್ನು ರಿಪೇರಿ ಮಾಡಲು ಕೋರಿ ಆಗಸ್ಟ್ ತಿಂಗಳಲ್ಲಿ ಮುಖ್ಯಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನೋಹರ ಸಂತಪೂರೆ ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರದಲ್ಲಿ ಕೋಣೆ ನೆಲಸಮಗೊಳಿಸಿ ನೂತನ ಕೋಣೆ ನಿರ್ಮಾಣಕ್ಕೆ ಮತ್ತು ರಿಪೇರಿ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.