ADVERTISEMENT

ಕೋವಿಡ್ 19 ಭೀತಿ: ಬೀದರ್‌ನಲ್ಲಿ ಸೆಕ್ಷನ್ 144 (3) ಜಾರಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 15:40 IST
Last Updated 18 ಮಾರ್ಚ್ 2020, 15:40 IST
ಎಚ್‌.ಆರ್‌.ಮಹಾದೇವ
ಎಚ್‌.ಆರ್‌.ಮಹಾದೇವ   

ಬೀದರ್: ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮಾರ್ಚ್ 31ರ ವರೆಗೆ ಸೆಕ್ಷನ್ 144 (3) ಜಾರಿಗೊಳಿಸಿ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಜಾತ್ರೆ, ಧಾರ್ಮಿಕ ಉತ್ಸವಗಳಲ್ಲಿ ಭಕ್ತರು ಭಾಗವಹಿಸುವಂತಿಲ್ಲ. ಸಂತೆ, ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತಿಲ್ಲ. ದೇವಸ್ಥಾನಗಳಲ್ಲಿ ದೇವರ ದರ್ಶನ ಹೊರತುಪಡಿಸಿ ಯಾವುದೇ ಉತ್ಸವಗಳನ್ನು ನಡೆಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

‘ಭಾರತೀಯರಾಗಲಿ, ವಿದೇಶಿಗರಾಗಲಿ ಜಿಲ್ಲೆಗೆ ವಿದೇಶಗಳಿಂದ ಬಂದಾಗ ಅವರಲ್ಲಿ ರೋಗ ಲಕ್ಷಣಗಳು ಕಂಡು ಬರದಿದ್ದರೂ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಬೇಕು. ಐದಕ್ಕಿಂತ ಹೆಚ್ಚು ಜನ ಸೇರುವುದು ಹಾಗೂ ಸಂಚಾರ ಬೆಳೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜಿಲ್ಲೆಯಾದ್ಯಂತ ಮಲ್ಟಿಫ್ಲೆಕ್ಸ್, ಚಿತ್ರಮಂದಿರ, ಉದ್ಯಾನ, ನಾಟಕ ಪ್ರದರ್ಶನ ಹಾಗೂ ಸರ್ಕಾರಿ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಮಾರ್ಚ್‌ 31ರ ವರೆಗೆ ಯಾವುದೇ ಜಾತ್ರೆಯನ್ನು ನಡೆಸಬಾರದು. ವಸ್ತು ಪ್ರದರ್ಶನ, ಮ್ಯಾರಥಾನ್, ಸಂಗೀತ ಹಬ್ಬಗಳನ್ನು ನಡೆಸುವಂತಿಲ್ಲ. ಮದುವೆ, ನಿಶ್ಚಿತಾರ್ಥ ಕಾರ್ಯಕ್ರಮಗಳು ಪೂರ್ವನಿಗದಿಯಾಗಿದ್ದಲ್ಲಿ ಅಂತಹ ಕಾರ್ಯಕ್ರಮಗಳಲ್ಲಿ 25ಕ್ಕೂ ಹೆಚ್ಚಿನ ಜನ ಸೇರದಂತೆ ಅಗತ್ಯ ಕ್ರಮ ವಹಿಸಬೇಕು’ಎಂದು ತಿಳಿಸಿದ್ದಾರೆ.

‘ಈಜುಕೋಳ, ಫಿಟ್‌ನೆಸ್‌ ಸೆಂಟರ್, ಜಿಮ್‌ ಸೆಂಟರ್‌ಗಳನ್ನು ಮುಚ್ಚಲಾಗುವುದು.ಕೋವಿಡ್‌ 19 ಸೋಂಕಿನ ಕುರಿತು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟ್ರಾಗ್ರಾಂ ಮತ್ತು ಟ್ವಿಟ್ಟರ್‌ನಂತಹ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಹೇರ್ ಕಟ್ಟಿಂಗ್ ಶಾಪ್ ಹಾಗೂ ಪಾರ್ಲರ್ ಅಂಗಡಿಗಳನ್ನು ಮುಚ್ಚಿಡುವಂತೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.