ADVERTISEMENT

ಬೀದರ್‌ | ಪಟಾಕಿ ಸದ್ದಿನಲ್ಲಿ ಮರೆಯಾಗದಿರಲಿ ಹಬ್ಬದ ಸಂಭ್ರಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಅಕ್ಟೋಬರ್ 2025, 4:28 IST
Last Updated 20 ಅಕ್ಟೋಬರ್ 2025, 4:28 IST
ಬೀದರ್‌ನ ಮಳಿಗೆಯೊಂದರಲ್ಲಿ ಮಾರಾಟಕ್ಕಿಟ್ಟಿರುವ ಆಕಾಶಬುಟ್ಟಿಗಳನ್ನು ನೋಡಿ ಸಂಭ್ರಮಿಸುತ್ತಿರುವ ಬಾಲಕ
ಬೀದರ್‌ನ ಮಳಿಗೆಯೊಂದರಲ್ಲಿ ಮಾರಾಟಕ್ಕಿಟ್ಟಿರುವ ಆಕಾಶಬುಟ್ಟಿಗಳನ್ನು ನೋಡಿ ಸಂಭ್ರಮಿಸುತ್ತಿರುವ ಬಾಲಕ   

ಬೀದರ್‌: ಬೆಳಕಿನ ಹಬ್ಬ ದೀಪಾವಳಿಯ ಹೊಸ್ತಿಲಲ್ಲಿದ್ದೇವೆ. ಎಲ್ಲೆಡೆ ಸಂಭ್ರಮ, ಸಡಗರ ಮನೆ ಮಾಡಿದೆ. ಇದರೊಂದಿಗೆ ಪಟಾಕಿ ಸದ್ದು ಕೂಡ ಹೆಚ್ಚಿದೆ. ಶುದ್ಧ ಗಾಳಿ ವಿಷಮವಾಗುವ ದುಗುಡವೂ ಕಾಡುತ್ತಿದೆ.

ಪ್ರತಿ ವರ್ಷ ದೀಪಾವಳಿ ಬಂದಾಗಲೆಲ್ಲಾ ಪರಿಸರ ಮಾಲಿನ್ಯ ಹಾಗೂ ಹಸಿರು ಪಟಾಕಿಯ ಕುರಿತು ಚರ್ಚೆಗಳಾಗುತ್ತವೆ. ಆದರೆ, ಅನುಷ್ಠಾನದ ವಿಷಯಕ್ಕೆ ಬಂದರೆ ನಿರಾಸೆ ಮೂಡುತ್ತದೆ.

ಹಿಂದಿನಂತೆ ಈ ವರ್ಷವೂ ಪಟಾಕಿಗಳ ಖರೀದಿ ಭರಾಟೆ ಜೋರಾಗಿದೆ. ಪಟಾಕಿ ಇಲ್ಲದೇ ದೀಪಾವಳಿ ಹಬ್ಬದ ಆಚರಣೆ ಇಲ್ಲ ಎಂಬ ಮನೋಭಾವ, ಬಲವಾದ ನಂಬಿಕೆಯೂ ಇದಕ್ಕೆ ಕಾರಣ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಪ್ರತಿ ವರ್ಷ ತರಹೇವಾರಿ ಪಟಾಕಿಗಳು ಲಗ್ಗೆ ಇಡುತ್ತವೆ. ಇತ್ತೀಚಿನ ವರ್ಷಗಳಿಂದ ಹಸಿರು ಪಟಾಕಿಯೂ ಸೇರಿಕೊಂಡಿದೆ. ಆದರೆ, ಹೆಸರಿಗಷ್ಟೇ ಸೀಮಿತವಾಗಿದೆ ಎಂಬ ಆರೋಪವೂ ಇದೆ.

ADVERTISEMENT

ಕೆಲವು ಪಟಾಕಿಗಳ ಮೇಲೆ ಹಸಿರು ಪಟಾಕಿ ಎಂದು ಬರೆದಿದ್ದರೂ ಅವು ಪರಿಸರಕ್ಕೆ ಪೂರಕವಾಗಿಲ್ಲ. ಇನ್ನು ಕೆಲವದರ ಮೇಲೆ ಹಸಿರು ಪಟಾಕಿ ಎಂದು ನಮೂದಿಸಿದ್ದರೂ ಕೂಡ ಅವುಗಳು ಹೆಚ್ಚಿನ ಹೊಗೆಯುಗುಳುತ್ತಿವೆ. ಸಾಮಾನ್ಯ ಪಟಾಕಿಗಳ ಮಾರಾಟವೂ ಹೆಚ್ಚಿದೆ. ಇದೆಲ್ಲದರ ಪರಿಣಾಮ ಇಡೀ ಪರಿಸರ ಮಾಲಿನ್ಯವಾಗುತ್ತಿದೆ. ಶುದ್ಧ ಗಾಳಿಯೆಲ್ಲ ವಿಷವಾಗುತ್ತಿದೆ. ಪಟಾಕಿಯ ಅಬ್ಬರ, ಸದ್ದಿನಲ್ಲಿ ಹಬ್ಬದ ಸಂಭ್ರಮ ಮರೆಯಾಗುತ್ತಿದೆ. ಆದರೆ, ಅನೇಕರು ಪಟಾಕಿ ಸಿಡಿಸುವುದೇ ಹಬ್ಬದ ಸಂಭ್ರಮದಂತೆ ಭಾವಿಸಿದ್ದಾರೆ.

ಸರ್ಕಾರದ ನಿರ್ದೇಶನದ ಪ್ರಕಾರ, ರಾತ್ರಿ 8 ಗಂಟೆಯಿಂದ ರಾತ್ರಿ 10ರ ವರೆಗೆ ಪಟಾಕಿ ಸಿಡಿಸಬೇಕು. ಆದರೆ, ಹೆಚ್ಚಿನವರು ಈ ನಿಯಮಕ್ಕೆ ಕ್ಯಾರೆ ಎನ್ನುತ್ತಿಲ್ಲ. ಬದಲಾಗಿ ಹಗಲು–ರಾತ್ರಿ ಬೇಕಾಬಿಟ್ಟಿ ಪಟಾಕಿಗಳನ್ನು ಸಿಡಿಸಲಾಗುತ್ತಿದೆ. ಯಾರೂ ಕಡಿವಾಣ ಹಾಕುವವರು ಇಲ್ಲದಂತಾಗಿದೆ.

ಯಾರಿಗೆಲ್ಲ ಸಮಸ್ಯೆ: ಅತಿಯಾದ ಪಟಾಕಿಗಳನ್ನು ಸಿಡಿಸುವುದರಿಂದ ನವಜಾತ ಶಿಶುಗಳು, ಹಿರಿಯ ನಾಗರಿಕರು, ಶ್ವಾಸಕೋಶ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಈ ವರ್ಗದ ಜನ ಹೆಚ್ಚು ಎಚ್ಚರ ವಹಿಸಬೇಕೆನ್ನುತ್ತಾರೆ ವೈದ್ಯರು.
ಆದರೆ, ಇಡೀ ಪರಿಸರದ ತುಂಬೆಲ್ಲಾ ವಿಷ ಗಾಳಿಯೇ ಇರುವುದರಿಂದ ಎಚ್ಚರ ವಹಿಸುವುದಾದರೂ ಹೇಗೆಂಬುದು ಸಾರ್ವಜನಿಕರ ಮುಂದಿರುವ ಪ್ರಶ್ನೆ.

‘ದೀಪಾವಳಿಯ ಮೊದಲ ಮೂರು ದಿನ ಪ್ರತಿಯೊಬ್ಬರೂ ಮನೆ, ಮಳಿಗೆಗಳಲ್ಲಿ ಪೂಜೆ ನೆರವೇರಿಸಿ, ಪಟಾಕಿಗಳನ್ನು ಸಿಡಿಸುತ್ತಾರೆ. ಅದು ಹಬ್ಬ ಹಾಗೂ ಪರಂಪರೆಯ ಭಾಗವಾಗಿದೆ. ಇದನ್ನು ಕಾನೂನಿನ ಮೂಲಕ ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಪ್ರತಿಯೊಬ್ಬರೂ ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು. ಮನೆಗಳಲ್ಲಿ ಹಣತೆ ಬೆಳಗಿಸಿ, ಸರಳವಾಗಿ ಹಬ್ಬ ಆಚರಿಸಿ, ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಇದು ಎಲ್ಲರ ಕರ್ತವ್ಯ. ಹಬ್ಬದ ಅವಧಿಯಲ್ಲಿ ಪರಿಸರ ಕಲುಷಿತವಾಗುವುದರಿಂದ ಈ ಅವಧಿಯಲ್ಲಿ ವಯಸ್ಸಾದವರು ಹೊರಗೆ ಓಡಾಡುವುದನ್ನು ತಪ್ಪಿಸುವುದು ಉತ್ತಮ’ ಎನ್ನುತ್ತಾರೆ ಹಿರಿಯ ವೈದ್ಯ ಡಾ. ಚಂದ್ರಕಾಂತ ಗುದಗೆ.

ಬಣ್ಣ ಬಣ್ಣದ ರಂಗೋಲಿ ಖರೀದಿಸಿದ ಮಹಿಳೆಯರು
ಪಟಾಕಿ ಖರೀದಿಸಿ ಕೊಂಡೊಯ್ಯುತ್ತಿರುವುದು

ಹಬ್ಬಕ್ಕೆ ಹೂ ಖರೀದಿ

ದೀಪಾವಳಿ ಹಬ್ಬವನ್ನು ಎಲ್ಲರೂ ಅರ್ಥಪೂರ್ಣವಾಗಿ ಆಚರಿಸಬೇಕು. ಪರಿಸರ ಮಾಲಿನ್ಯ ಆಗದಂತೆ ಎಚ್ಚರ ವಹಿಸಬೇಕು. ಹಸಿರು ಪಟಾಕಿಗಳೊಂದಿಗೆ ದೀಪಾವಳಿ ಆಚರಿಸಿ ಗಾಳಿ ವಿಷವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.
ಈಶ್ವರ ಬಿ. ಖಂಡ್ರೆ ಪರಿಸರ-ಅರಣ್ಯ ಖಾತೆ ಸಚಿವ

ಈಗಲೂ ಮಣ್ಣಿನ ಹಣತೆಯೇ ಅಚ್ಚುಮೆಚ್ಚು

ದೀಪಾವಳಿ ಅಂದರೆ ಸಾಲು ಸಾಲು ದೀಪಗಳು. ಪ್ರತಿಯೊಂದು ಮನೆಗಳು ಕೂಡ ಹಣತೆಗಳ ದೀಪದಿಂದ ಕಂಗೊಳಿಸುತ್ತವೆ. ಆಧುನಿಕತೆಯ ಭರಾಟೆಯಲ್ಲಿ ಈಗಲೂ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುಕಟ್ಟೆಯ ತುಂಬೆಲ್ಲಾ ವೈವಿಧ್ಯವಾದ ಪ್ಲಾಸ್ಟಿಕ್‌ ಹಣತೆಗಳು ಬಂದಿದ್ದರೂ ಯಾರೂ ಅವುಗಳತ್ತ ಆಕರ್ಷಿತರಾಗುತ್ತಿಲ್ಲ. ಮಣ್ಣಿನ ಹಣತೆಗಳನ್ನೇ ಖರೀದಿಸಿ ಅವುಗಳಿಗೆ ಮನೆಯಲ್ಲೇ ಬಣ್ಣ ಬಳಿದು ಚೆಂದಗೊಳಿಸಿದ್ದಾರೆ.

ಖರೀದಿ ಭರಾಟೆ

ಹಬ್ಬದ ಹಿನ್ನೆಲೆಯಲ್ಲಿ ಬೀದರ್‌ನ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರ ಜನಸಂದಣಿ ಕಂಡು ಬಂತು. ಹೂ ಹಣ್ಣು ತರಕಾರಿ ಅಲಂಕಾರಿಕ ವಸ್ತುಗಳು ಮಣ್ಣಿನ ಹಣತೆ ಕಬ್ಬು ಬಾಳೆದಿಂಡು ಬೂದುಗುಂಬಳ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿದರು. ತರಕಾರಿಗಳ ದರದಲ್ಲಿ ಅಲ್ಪ ಏರಿಕೆ ಉಂಟಾದರೆ ಹಣ್ಣುಗಳ ಬೆಲೆ ಇಳಿಮುಖಗೊಂಡಿದೆ. ಆದರೆ ಹಬ್ಬದ ಸಂಭ್ರಮದಲ್ಲಿ ಜನ ಬೆಲೆ ಏರಿಕೆ ಲೆಕ್ಕಿಸದೇ ಅಗತ್ಯ ವಸ್ತುಗಳನ್ನು ಖರೀದಿಸಿದರು. ನಗರದ ಮೋಹನ್‌ ಮಾರ್ಕೆಟ್‌ ಹಳೆ ಬಸ್‌ ನಿಲ್ದಾಣ ಶಿವನಗರ ಗುಂಪಾಮೈಲೂರ್‌ ಕ್ರಾಸ್‌ ಹಾರೂರಗೇರಿ ಕ್ರಾಸ್‌ ಬೊಮ್ಮಗೊಂಡೇಶ್ವರ ವೃತ್ತ ಕುಂಬಾರವಾಡ ಕ್ರಾಸ್‌ ರಾಂಪೂರೆ ಕಾಲೊನಿ ಸೇರಿದಂತೆ ಇತರೆ ಕಡೆಗಳಲ್ಲಿ ದಿನವಿಡೀ ಖರೀದಿಗೆ ಜನಸಂದಣಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.