
ಹುಮನಾಬಾದ್: ಮಹಾ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅವರ ಸೇವೆಯನ್ನು ಸ್ಮರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ನಡೆದ ಸಂತ ಸೇವಾಲಾಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂತ ಸೇವಾಲಾಲ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ಸಾಗಿಸಿ ಇತರರಿಗೆ ಮಾದರಿಯಾಗಬೇಕು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಂಜುಂ ತಬಸುಮ್, ಸುಭಾಷ ಆರ್ಯ, ಬಾಬು ಪವಾರ್ ಸೇರಿದಂತೆ ಇತರರು ಇದ್ದರು.
ಸಂಭ್ರರ ಮೆರವಣಿಗೆ: ಸಡಗರ, ಸಂಭ್ರಮದ ನಡುವೆ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಉತ್ಸವ ಪಟ್ಟಣದಲ್ಲಿ ಭಾನುವಾರ ಜರುಗಿತು.
ಇಲ್ಲಿಯ ತಹಶೀಲ್ದಾರ್ ಕಚೇರಿಯಿಂದ ಸಾರೋಟಿನಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆಯು ಪ್ರವಾಸಿ ಮಂದಿರ, ಕೇಂದ್ರ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಜರುಗಿತು. ಸಾಂಪ್ರದಾಯಿಕ ವಾದ್ಯ ಮೇಳಗಳು, ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಯುವತಿಯರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಲಂಬಾಣಿ ನೃತ್ಯ ಮಾಡಿದರು. ಯುವಕರು, ಡಿಜೆ ಸಂಗೀತಕ್ಕೆ ಮನಸೋತು ಕುಣಿದು ಕುಪ್ಪಳಿಸಿದರು.
ಸಂತ್ ಸೇವಾಲಾಲ್ ಮಹಾರಾಜರ ಜಯಂತಿ ಪ್ರಯುಕ್ತ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಇಲ್ಲಿಯ ಪ್ರವಾಸಿ ಮಂದಿರ ಹತ್ತಿರ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಂಜಾರಾ ಸಮುದಾಯದ ಜನರೊಂದಿಗೆ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರ ಹಿಡಿದುಕೊಂಡು ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದರು. ಬಂಜಾರಾ ಸಮುದಾಯದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸಿ ನೃತ್ಯ ಪ್ರದರ್ಶನ ಮಾಡಿರುವುದು ನೋಡುಗರ ಕಣ್ಮನ ಸೆಳೆದವು.
ಬಿಜೆಪಿ ಮಂಡಲ ಅಧ್ಯಕ್ಷ ಅನಿಲ್ ಪಸರ್ಗಿ, ತಾಲ್ಲೂಕು ಬಂಜಾರ ಸಮಾಜದ ಅಧ್ಯಕ್ಷ ಶಂಕರ ಪವಾರ್, ಆರ್.ಡಿ. ಪವಾರ್, ರಾಮು ಪವಾರ್, ಬಳಿರಾಮ್, ಕಿರಣ , ಗಣಪತಿ ರಾಠೋಡ, ಬಿಕ್ಕು ಚೌಹಾಣ್, ಕಿಸನ್ ರಾಠೋಡ್, ದೇವಿದಾಸ ರಾಠೋಡ, ಸುಭಾಷ್ ಪವಾರ್, ಸುಧಾಕರ್ ಪವಾರ್, ದೇವಿದಾಸ್ ಪವಾರ್, ಸೀತಾರಾಮ್ ಪವಾರ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.